ಗಂಗಾ ಕಲ್ಯಾಣ ಯೋಜನೆಗಳ ತ್ವರಿತ ಜಾರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.26- ವಿವಿಧ ನಿಗಮಗಳ ಗಂಗಾ ಕಲ್ಯಾಣ ಯೋಜನೆಗಳ ತ್ವರಿತ ಜಾರಿಗೆ ವಿಶೇಷ ಆದ್ಯತೆ ನೀಡಬೇಕು. ಈಗಾಗಲೇ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ನವೆಂಬರ ಅಂತ್ಯದೊಳಗೆ ವಿದ್ಯುತ ಸಂಪರ್ಕ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಪಂ ಸಭಾಂಗಣದಲ್ಲಿ 2019-20 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 2 ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹುಸಿ ನೆಪಗಳನ್ನು ಹೇಳದೆ 2016-17, 2017-18 ನೇ ಸಾಲಿನ ಹಳೆಯ ಬಾಕಿ ಕಾಮಗಾರಿಗಳನ್ನು ತಕ್ಷಣವೇ ಮುಗಿಸಿ, ಹೊಸ ಕೆಲಸಗಳಿಗೂ ಸಹ ಚಾಲನೆ ನೀಡಬೇಕು, ನಿರ್ಲಕ್ಷ್ಯತನ ತೊರಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಶಾಸಕರಾದ ಹೆಚ್.ಡಿ. ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ ಹಾಗೂ ಎ.ಟಿ. ರಾಮಸ್ವಾಮಿ, ಲಿಂಗೇಶ್ ಅವರು ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಾಗುತ್ತಿರುವ ವಿಳಂಬ ಹಾಗೂ ನಿಗಧಿ ಪಡಿಸಿರುವ ಗುರಿಯಲ್ಲಿನ ಕೊರತೆ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಆಗುತ್ತಿರುವ ಸಮಸ್ಯೆ, ಯೋಜನೆಯ ಸ್ವರೂಪದಲ್ಲಿರುವ ನ್ಯೂನ್ಯತೆಗಳ ಬಗ್ಗೆ ಗಮನ ಸೆಳೆದು ಟೆಂಡರ್ ಪ್ರಕ್ರಿಯೆ ವಿಕೇಂದ್ರಿಕರಣಕ್ಕೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೆಪಿಟಿಸಿಎಲïನ 5 ವಿಭಾಗಗಳಿದ್ದರೂ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗುತ್ತಿರುವ ವಿಳಂಬವನ್ನು ತಾವು ಸಹಿಸುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕಾಗಿ ವಿದ್ಯುತ್ ನಿಗಮದಿಂದ ಸಮನ್ವಯ ಸಭೈಯಾಗಬೇಕು ಹಾಗೂ ಸಮನ್ವಯಾಧಿಕಾರಿ ನೇಮಕವಾಗಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ನಿರಂತರ ಸಭೆಗಳನ್ನು ನಡೆಸಿ ಯೋಜನೆ ಅನುಷ್ಠಾನ ಚುರುಕುಗೊಳಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್ ಸಚಿವರಿಗೆ ತಿಳಿಸಿದರು. ಇದೇ ವೇಳೆ ಹಕ್ಕು ಪತ್ರ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಸರಿಪಡಿಸುವಂತೆ ಶಾಸಕರಾದ ಹೆಚ್.ಡಿ. ರೇವಣ್ಣ, ಶಿವಲಿಂಗೇಗೌಡ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸಚಿವರಿಗೆ ಮನವಿ ಮಾಡಿದರು.

ಎಲ್ಲಾ ಹೋಬಳಿಗಳಲ್ಲಿ ಪ್ರತಿ ತಿಂಗಳು ಕಂದಾಯ ಅದಾಲತ್, ಪಿಂಚಣಿ ಅದಾಲತ್‍ಗಳನ್ನು ಕಡ್ಡಾಯವಾಗಿ ನಡೆಸಬೇಕು. ಜನಸಾಮಾನ್ಯರ ಬಳಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾವಹಿಸಬೇಕು ಎಂದು ನಿರ್ದೇಶನ ನೀಡಿದರು. ಶಾಸಕ ಎ.ಟಿ. ರಾಮಸ್ವಾಮಿ ಅರಕಲಗೂಡು ತಾಲ್ಲೂಕಿನ ಅರಸೀಕಟ್ಟೆ ಅಮ್ಮ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ, ಇಲ್ಲಿನ ಸಮೀಪದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗ ತೆರವುಗೊಳಿಸಲು ಆಗುತ್ತಿರುವ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಜಾಗವನ್ನು ಹಾಗೂ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಶಾಸಕ ಹೆಚ್.ಡಿ ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಯೋಜನೆ ಮುಳುಗಡೆ ಪ್ರದೇಶದಲ್ಲಿ ನೀರಾಶ್ರಿತರಿಗೆ ವಿವಿಧೆಡೆ 80 ಸಾವಿರ ಎಕರೆ ಜಮೀನು ಮೀಸಲಿರಿಸಲಾಗಿದೆ, ಆದರೆ 414 ಪ್ರಕರಣಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ 1654 ಎಕರೆ ಜಮೀನು ಅಕ್ರಮ ಮಂಜೂರಾತಿ ಮಾಡಲಾಗಿದೆ ಎಂದು ಹೇಳಿದರು.

ಸಚಿವ ಮಾಧುಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಯವರು ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮವಹಿಸಲಿದೆ ಎಂದರು.
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಬೇಕು. ಇದರೊಂದಿಗೆ ರಾಜ್ಯದ ಪೂರಕ ಆರ್ಥಿಕ ನೆರವು ಯೋಜನೆ ಎಲ್ಲಾ ಅರ್ಹ ರೈತರಿಗೆ ತಲುಪಬೇಕು ಎಂದು ಮಾಧುಸ್ವಾಮಿ ಸೂಚನೆ ನೀಡಿದರು.

ಎಲ್ಲಾ ರೈತರಲ್ಲಿ ಜಾಗೃತಿ ಮೂಡಿಸಿ ಬೆಳೆ ವಿಮೆ ಮಾಡಿಸಲು ಪ್ರೇರಣೆ ನೀಡಬೇಕು, ಕೃಷಿ ಇಲಾಖೆ ಈ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಸ್ವರೂಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮï ನಿವಾಸ್ ಸೆಪಟ್, ಆರ್. ಗಿರೀಶ್, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀನಿವಾಸ್‍ಗೌಡ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments