ಗೋಲೀಬಾರ್ ಪ್ರಕರಣ ಕುರಿತು ತನಿಖಾ ವರದಿ ಬಳಿಕ ಸೂಕ್ತ ನಿರ್ಧಾರ : ಸಚಿವ ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ – ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮೃತರಿಗೆ ಪರಿಹಾರ ಕೊಡುತ್ತೇನೆ ಎಂದು ಘೋಷಣೆ ಮಾಡಿರಲಿಲ್ಲ. ಹೀಗಿರುವಾಗ ಪರಿಹಾರ ವಾಪಸ್ ತೆಗೆದುಕೊಳ್ಳುವುದು ಎಲ್ಲಿಂದ ಬಂತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಪ್ರಕರಣ ದಾಖಲಿಸಿ ಪರಿಹಾರ ಘೋಷಣೆ ಮಾಡುವುದು ಸರಿಯಲ್ಲ. ಮೃತರು ಗಲಭೆಯಲ್ಲಿ ಪಾಲ್ಗೊಂಡಿದ್ದರೋ ಇಲ್ಲವೋ ಎಂಬುದರ ಕುರಿತು ಸಿಸಿ ಟಿವಿ ಫೂಟೇಜ್‍ಗಳ ಪರಿಶೀಲನೆ ನಡೆಸಲಾಗುತ್ತಿದೆ ವರದಿ ಬಂದ ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸರ್ಕಾರಿ ಜಮೀನುಗಳನ್ನು ಬಳಸಿಕೊಂಡು ಖಾಸಗಿ ಪ್ರತಿಮೆ ನಿರ್ಮಿಸಬಾರದು ಎಂದು ಹೈ ಕೋರ್ಟ್ ಆದೇಶ ಇದ್ದರೂ ಇದನ್ನು ಧಿಕ್ಕರಿಸಿ ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಿಸುತ್ತಿರುವುದು ಕಾನೂನು ಬಾಹಿರ ಎಂದು ಹೇಳಿದರು. ಪ್ರತಿಮೆಗಳನ್ನು ನಿರ್ಮಿಸುವುದು ಅವರ ಭಾವನೆಗಳಿಗೆ ಬಿಟ್ಟಿದ್ದು, ಆದರೆ, ಸರ್ಕಾರಿ ಗೋಮಾಳ, ಮೀಸಲು ಭೂಮಿಗಳನ್ನು ಬಳಸಿ ಖಾಸಗಿ ಪ್ರತಿಮೆ ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ ಎಂದರು.

ಪ್ರತಿಮೆ ಮಾಡಲು ನಮ್ಮ ವಿರೋಧವಿಲ್ಲ. ಕಾನೂನು ಚೌಕಟ್ಟಿನೊಳಗೆ ನಿರ್ಮಾಣ ಮಾಡಿಕೊಳ್ಳಲಿ. ಆದರೆ ಅಂದಿನ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿರುವುದು ತಪ್ಪು ಎಂದು ಹೇಳಿದರು.
ಉತ್ತರಪ್ರದೇಶದಂತೆ ನಮ್ಮ ರಾಜ್ಯದಲ್ಲೂ ಸಿಎಎ ,ಎನ್‍ಆರ್‍ಸಿ ಹೆಸರಿನಲ್ಲಿ ಆಸ್ತಿ-ಪಾಸ್ತಿ ಹಾನಿಗೆ ಮುಂದಾದರೆ ಅಂತಹವರ ವಿರುದ್ಧ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.

Facebook Comments