ನಿವೃತ್ತಿ ಕುರಿತು ಬಿಎಸ್‍ವೈ ಚರ್ಚಿಸಿಲ್ಲ: ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.20- ಮೂರುವರೆ ವರ್ಷದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿವೃತ್ತಿಯಾಗುವ ವಿಚಾರದ ಬಗ್ಗೆ ನಮ್ಮೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳುವ ಮೂಲಕ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನಾವೇ ಮತ್ತೆ ಐದು ವರ್ಷ ಸರ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಅವರು ಮೂರುವರೆ ವರ್ಷದ ಬಳಿಕ ನಿವೃತ್ತಿಯಾಗುತ್ತಾರೆ ಎಂಬ ವಿಚಾರದ ಬಗ್ಗೆ ಎಲ್ಲೂ, ಯಾರೊಂದಿಗೂ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಸಿಎಂ ದಾವೋಸ್‍ಗೆ ಹೋಗಿದ್ದಾರೆ. ಅಲ್ಲಿಂದ ಬಂದ ಬಳಿಕ ಈ ಬಗ್ಗೆ ನಿರ್ಧಾರ ಆಗಬಹುದು ಎಂದರು.
ಅರಕಲಗೂಡು, ಹಾಸನ, ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹ ಕಾನೂನು ಬಾಹಿರ ಅಲ್ಲ. ರಾಜ್ಯದ ಹಲವೆಡೆಗಳಲ್ಲಿ ಈ ರೀತಿಯ ಟೋಲ್ ಸಂಗ್ರಹಕ್ಕೆ ಸರ್ಕಾರ ಅವಕಾಶ ನೀಡಿದೆ. ಕೃಷಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಪ್ರವೇಶ ನೀಡುವ ಬಗ್ಗೆ ಸಚಿವರಿಗೆ ಡಿಸಿ ಮಾಹಿತಿ ನೀಡಿದರು.

Facebook Comments