ವಿಧಾನಸಭೆ-ಪರಿಷತ್ ಸಭಾಂಗಣದಲ್ಲೇ ನಡೆಯಲಿದೆ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.24-ವಿಧಾನಸಭಾ ಸಭಾಂಗಣ ಹಾಗೂ ವಿಧಾನ ಪರಿಷತ್ತಿನ ಸಭಾಂಗಣದಲ್ಲೇ ಈ ಬಾರಿಯ ಮಳೆಗಾಲದ ಅಧಿವೇಶನ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು.

ಪ್ರಸಕ್ತ 15ನೇ ವಿಧಾನಸಭೆಯ 7ನೇ ಅಧಿವೇಶನ ನಡೆಸುವ ಸಾಧ್ಯಾಸಾಧ್ಯತೆ ಕುರಿತಂತೆ ಇಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು , ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್‌, ವಿಧಾನಸಭೆಯ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸಭೆಯ ಸಭಾಂಗಣವನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿವೇಶನಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಫೇಸ್ ಶೀಲ್ಡ್ , ಮಾಸ್ಕ್ ಕಡ್ಡಾಯಗೊಳಿಸಲಾಗುವುದು. ಒಟ್ಟು 274 ಸೀಟುಗಳಿವೆ. ಸೀಟ್ ಮಧ್ಯೆ ಗಾಜಿನ ಪರದೆ ಹಾಕ್ತೇವೆ. ಅಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ ಮಾತ್ರ ಅಧಿವೇಶನಕ್ಕೆ ಅವಕಾಶವಿದೆ.

ಪತ್ರಕರ್ತರ ಗ್ಯಾಲರಿ ಬಗ್ಗೆ ಪತ್ರಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ನಿರ್ಬಂಧ ವಿಧಿಸಲಾಗುವುದು.

ಸಭಾಧ್ಯಕ್ಷರು, ಕಾರ್ಯದರ್ಶಿಗಳು ಸದನವನ್ನುವೀಕ್ಷಣೆ ಮಾಡಿದ್ದಾರೆ. ವಿಧಾನಸೌಧದಲ್ಲೇ ಸದನ ನಡೆಸಲು ಸ್ಪೀಕರ್ ತೀರ್ಮಾನ ಮಾಡಿದ್ದಾರೆ. ಸ್ಪೀಕರ್ ತೀರ್ಮಾನಕ್ಕೆ ನಾವು ಸಮ್ಮತಿ ನೀಡಿದ್ದೇವೆ ಎಂದು ಹೇಳಿದರು.

ಎರಡು ಸೀಟ್ ಮಧ್ಯೆ ಗಾಜಿನ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ನಿರ್ಭಂಧವಿದೆ. ಹೀಗಾಗಿ ಅಧಿವೇಶನ ಪ್ರವೇಶಕ್ಕೆ ಸಾರ್ವಜನಿಕರಿಗೆ ಪಾಸ್ ನೀಡಲ್ಲ ಎಂದರು.

ಪತ್ರಕರ್ತರಿಗೂ ಎರಡು ಗ್ಯಾಲರಿ ಮಾಡಲು ತೀರ್ಮಾನ ಮಾಡಲಾಗಿದೆ. ಪ್ರತೀ ಸದಸ್ಯರಿಗೆ ಫೇಸ್ ಶೀಲ್ಡ್, ಮಾಸ್ಕ್ ಕೊಡುತ್ತೇವೆ. ಇಲಾಖೆಗೆ ಒಬ್ಬ ಅಧಿಕಾರಿ ಮಾತ್ರ ಬರಬೇಕು. ಸಚಿವರ ಜೊತೆ ಅವರ ಆಪ್ತ ಕಾರ್ಯದರ್ಶಿ ಮಾತ್ರ ಇರಬೇಕು . 70 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

Facebook Comments

Sri Raghav

Admin