ರೇಣು ಪರ ನೂತನ ಸಚಿವ ಮಾಧು ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.22-ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ಕೊಡುತ್ತೇನೆ ಎಂಬ ಶಾಸಕ ರೇಣುಕಾಚಾರ್ಯ ಅವರ ಹೇಳಿಕೆಗೆ ನೂತನ ಸಚಿವ ಮಾಧುಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. ಸಕಲೇಶಪುರ ತಾಲೂಕಿನ ಹಾನುಬಾಳು ಮತ್ತಿತರೆಡೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ನಮಗೂ ಸಚಿವ ಸ್ಥಾನ ಸಿಗದಿದ್ದರೆ ನಾವೂ ಕೂಡ ರೇಣುಕಾಚಾರ್ಯ ಅವರಂತೆಯೇ ಹೇಳುತ್ತಿದ್ದೆವು ಎನ್ನುವ ಮೂಲಕ ರೇಣು ಪರ ಬ್ಯಾಟ್ ಮಾಡಿದ್ದಾರೆ.

ರೇಣುಕಾಚಾರ್ಯ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರನ್ನು ಹೊರಗೆ ಹೋಗಲು ಬಿಡಲಾಗುತ್ತದೆಯೇ? ಅವರನ್ನು ಜೊತೆಗಿಟ್ಟುಕೊಳ್ಳುವ ಶಕ್ತಿ ನಮಗಿದೆ ಎಂದರು.
ಪಕ್ಷದಲ್ಲಿ ಗೆದ್ದು ಬಂದಿರುವವರೆಲ್ಲರೂ ಸಚಿವರಾಗುವ ಅರ್ಹತೆಯುಳ್ಳವರೇ ಆಗಿದ್ದಾರೆ.

ಹಾಗೆಂದು ಎಲ್ಲರಿಗೂ ಸ್ಥಾನ ಸಿಗುವುದಿಲ್ಲ. ಆದರೂ ಜಿಲ್ಲಾವಾರು, ಜನಾಂಗವಾರು ಸಚಿವ ಸ್ಥಾನ ನೀಡಬೇಕಿದೆ. ಇಲ್ಲದಿದ್ದರೆ ಪಕ್ಷ ಸಂಘಟನೆಗೆ ಕಷ್ಟವಾಗುತ್ತದೆ ಎಂದು ಹೇಳಿದರು. ರಾಷ್ಟ್ರ ನಾಯಕರ ತೀರ್ಮಾನಕ್ಕೆ ಹಲವಾರು ಕಾರಣಗಳಿರುತ್ತವೆ. ಯಾರನ್ನೂ ಮಣಿಯಲು ಮುಂದಾಗಿಲ್ಲ.  ಅವರನ್ನು ಮಣಿಸಲಾಗಿದೆ, ಇವರನ್ನು ಮಣಿಸಲಾಗಿದೆ, ಏನೇನೋ ಆಗಿಬಿಡುತ್ತದೆ ಎಂಬುದೆಲ್ಲ ಸುಳ್ಳು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಆಡಳಿತವನ್ನು ನೋಡಿಕೊಳ್ಳಬೇಕು, ಪಕ್ಷ ಸಂಘಟನೆಯತ್ತಲೂ ಗಮನಹರಿಸಬೇಕು. ಹಾಗಾಗಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಏನೇ ಗೊಂದಲಗಳಿದ್ದರೂ ಅದೆಲ್ಲವನ್ನು ಸರಿಪಡಿಸುತ್ತಾರೆ ಎಂದು ಮಾಧುಸ್ವಾಮಿ ತಿಳಿಸಿದರು.

Facebook Comments