ಮಧ್ಯಪ್ರದೇಶದಲ್ಲಿ ಮುಗಿದ ಹಾವು-ಏಣಿ ಆಟ, ಅಧಿಕಾರ ಹಿಡಿಯುವತ್ತ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

Madya-Pradesh-1

ಬೆಂಗಳೂರು, ಡಿ.11-ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಹಾವು-ಏಣಿ ಆಟದಲ್ಲಿ ಕಾಂಗ್ರೆಸ್ ಸರಳ ಬಹುಮತ ಸಾಧಿಸುವತ್ತ ಹೆಜ್ಜೆ ಹಾಕಿದೆ.
230 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ 115 ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡುವತ್ತ ದಾಪುಗಾಲು ಹಾಕಿದೆ. ನಾಲ್ಕು ಸ್ಥಾನಗಳನ್ನು ಗೆದ್ದಿರುವ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಕಾಂಗ್ರೆಸ್‍ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಪಕ್ಷೇತರರು ಆರು ಸ್ಥಾನಗಳನ್ನು ಗಳಿಸಿದ್ದು, ಇವರೂ ಕೂಡ ಸರ್ಕಾರ ರಚನೆ ಮಾಡುವ ಪಕ್ಷದತ್ತ ವಾಲಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧಿಕಾರದ ಗದ್ದುಗೇರುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಮುಖಂಡ ಕಮಲನಾಥ್ ಮನೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಅತ್ತ ದೆಹಲಿಯಲ್ಲೂ ಕೂಡ ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ನಂತರದ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ವರಿಷ್ಠರು ರಾಹುಲ್‍ಗಾಂಧಿ ನೇತೃತ್ವದಲ್ಲಿ ಚರ್ಚೆ ನಡೆಸಿದ್ದು, ಶತಾಯಗತಾಯ ಸರ್ಕಾರ ರಚನೆ ಕಸರತ್ತನ್ನು ತೀವ್ರಗೊಳಿಸಿದ್ದಾರೆ.

ಬಿಜೆಪಿ ಕೂಡ 105 ಸ್ಥಾನಗಳನ್ನು ಗಳಿಸಿದ್ದು, ಬಹುಮತಕ್ಕೆ ಇನ್ನು 11 ಸ್ಥಾನ ಬೇಕಿದೆ. ಬಿಎಸ್‍ಪಿ ಮತ್ತು ಪಕ್ಷೇತರರು ಸೇರಿದರೂ ಮ್ಯಾಜಿಕ್ ನಂಬರ್ ಗಳಿಸಲು ಸಾಧ್ಯವಿಲ್ಲ. ಹೀಗಾಗಿ ಮಧ್ಯಪ್ರದೇಶ ಕೈ ವಶವಾಗುವುದು ಬಹುತೇಕ ನಿಶ್ಚಿತವಾದಂತಿದೆ. ಕಾಂಗ್ರೆಸ್‍ನ ಹಿರಿಯ ನಾಯಕ ಕಮಲ್‍ನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಂದು ರಾತ್ರಿ ವೇಳೆಗೆ ಇದರ ಸ್ಪಷ್ಟ ಚಿತ್ರಣ ಲಭಿಸಲಿದೆ.

Facebook Comments

Sri Raghav

Admin