ಸೆರೆಯಾಗುತ್ತಲೇ ಇವೆ ಚಿರತೆಗಳು, ಗ್ರಾಮಸ್ಥರಲ್ಲಿ ಹೆಚ್ಚಾಗುತ್ತಿರುವ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಮಾಗಡಿ, ಮೇ 26- ಸೆರೆಯಾಗುತ್ತಲೇ ಇರುವ ಚಿರತೆಗಳು… ಗ್ರಾಮಸ್ಥರಲ್ಲಿ ದಿನನಿತ್ಯ ಹೆಚ್ಚಾಗುತ್ತಿರುವ ಆತಂಕ… ಯಾವಾಗ, ಎಲ್ಲಿ ದಾಳಿ ಮಾಡುತ್ತವೋ ಎಂದು ಪ್ರತಿ ದಿನ, ಪ್ರತಿ ಕ್ಷಣ ಜೀವ ಕೈಯಲ್ಲಿಡಿದು ಕಾಲ ಕಳೆಯುವಂತಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ.

ಅರಣ್ಯ ಇಲಾಖೆ ಇಟ್ಟಿರುವ ಬೋನುಗಳಿಗೆ ಚಿರತೆಗಳು ಸೆರೆಯಾಗುತ್ತಲೇ ಇವೆ. ಇನ್ನೂ ಎಷ್ಟು ಚಿರತೆಗಳು ಇವೆಯೋ ಎಂಬ ಆತಂಕ ಮನೆ ಮಾಡಿದೆ.  ಕಳೆದ ರಾತ್ರಿ ತಾಲ್ಲೂಕಿನ ತಗ್ಗಿಕುಪ್ಪೆ ಬಳಿ ಮೂರು ವರ್ಷದ ಹೆಣ್ಣು ಚಿರತೆ ಹಾಗೂ ಬೋಡಗನಪಾಳ್ಯದ ಬಳಿ 10 ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಈಗಾಗಲೇ ಇಲ್ಲಿಯವರೆಗೂ ಸುಮಾರು 12 ಚಿರತೆಗಳು ಸೆರೆಯಾಗಿವೆ. ಮೇಲಿಂದ ಮೇಲೆ ಚಿರತೆಗಳು ಅರಣ್ಯ ಇಲಾಖೆ ಇಟ್ಟಿರುವ ಬೋನಿನಲ್ಲಿ ಬಂಧಿಯಾಗುತ್ತಲೇ ಇವೆ.

ಚಿರತೆಗಳ ಉಪಟಳವನ್ನು ನಿಯಂತ್ರಿಸುವುದೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸವಾಲಾಗಿದೆ. ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅಲ್ಲದೆ, ಜಮೀನುಗಳತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಜಾನುವಾರುಗಳಂತೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಒಟ್ಟಿನಲ್ಲಿ ಇನ್ನೂ ಎಷ್ಟು ಚಿರತೆಗಳು ನಮ್ಮ ತಾಲ್ಲೂಕಿನಲ್ಲಿವೆಯೋ? ಇವುಗಳಿಂದ ಮುಕ್ತಿ ಯಾವಾಗ ದೊರೆಯುತ್ತದೋ? ನಿರ್ಭೀತಿಯಿಂದ ನಾವು ಯಾವಾಗ ಕೆಲಸ-ಕಾರ್ಯಗಳನ್ನು ಮಾಡುವಂತಾಗುತ್ತದೆಯೋ ಎಂದು ಗ್ರಾಮಸ್ಥರು ಪ್ರತಿನಿತ್ಯ ಮಾತನಾಡಿಕೊಳ್ಳುತ್ತಿದ್ದಾರೆ.

Facebook Comments