ನಾಳೆ ಮಾಘ ಹುಣ್ಣಿಮೆ, ಈ ಕಾರ್ಯ ಮಾಡಿದರೆ ನಿವಾರಣೆಯಾಗುತ್ತೆ ನಿಮ್ಮೆಲ್ಲ ದೋಷ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.26- ಅತ್ಯಂತ ಶುಭವೆಂದೇ ಭಾವಿಸಲಾದ ಪವಿತ್ರವಾದ ಮಾಘ ಹುಣ್ಣಿಮೆ ಈ ಬಾರಿ ಫೆಬ್ರವರಿ 27ರ ಶನಿವಾರದಂದು(ನಾಳೆ) ಬಂದಿದ್ದು, ಈ ದಿನದಂದು ಪುಣ್ಯ ಕ್ಷೇತ್ರದ ನದಿಗಳಲ್ಲಿ ಮಿಂದರೆ ದೋಷಗಳು ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ. ಈ ದಿನದಂದು ಪುಣ್ಯಸ್ನಾನ ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ ಮೋಕ್ಷವನ್ನು ಪಡೆಯುತ್ತಾರೆ ಎಂದು ಪ್ರತೀತಿ ಹಿಂದೂ ಸಂಪ್ರದಾಯದಲ್ಲಿದೆ.

ಮಾಘ ಮಾಸವು ಅನೇಕ ಶುಭ ದಿನಾಂಕಗಳಿಂದಾಗಿ ಮಹತ್ವ ಹೊಂದಿದೆ. ಭಗವಾನ್ ವಿಷ್ಣುವನ್ನು ವಿಶೇಷವಾಗಿ ಮಾಘ ಪೂರ್ಣಿಮೆಯಲ್ಲಿ ಪೂಜಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಮಾಡುವ ಸ್ನಾನದಿಂದ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ, ಕರ್ಮಗಳು ಕಳೆಯುತ್ತವೆ. ಹಾಗಾಗಿ ಮಾಘ ಪೂರ್ಣಿಮ ಸಮಯದಲ್ಲಿ, ಗಂಗಾ, ಯಮುನಾ, ನರ್ಮದಾ, ಕಾವೇರಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಭಕ್ತರು ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆಯಾಗಿದೆ.

ಮಾಘ ಪೂರ್ಣಿಮಾದ ಪೂಜ ಸಮಯ: ಈ ಬಾರಿ ಇಂದು(ಫೆ.26ರಂದು) ಮಧ್ಯಾಹ್ನ 3.49ಕ್ಕೆ ಶುಭ ಸಮಯ ಪ್ರಾರಂಭವಾಗಿ ಫೆ.27ರ ಶನಿವಾರ ಮಧ್ಯಾಹ್ನ 1.46ಕ್ಕೆ ಕೊನೆಗೊಳ್ಳುತ್ತದೆ. ಮಾಘ ಪೂರ್ಣಿಮಾ ಆಚರಿಸುವವರು ಮಾಘ ಹುಣ್ಣಿಮೆಯ ಹಿಂದಿನ ದಿನವೇ ಉಪವಾಸ ಕೈಗೊಂಡು, ನಂತರ ಸತ್ಯನಾರಾಯಣ ಪೂಜೆ ಕೈಗೊಳ್ಳುತ್ತಾರೆ.

ಇನ್ನು ಕೆಲವರು ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜ್, ಹರಿದ್ವಾರ ಮತ್ತು ಕಾಶಿಯಂತಹ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಪುಣ್ಯನದಿಗಳಲ್ಲಿ ಮಿಂದು ಪುನೀತರಾಗುತ್ತಾರೆ. ಸಂಪತ್ತು ಮತ್ತು ಅದೃಷ್ಟ ಒಲಿಯಲಿದೆ ಎಂಬ ನಂಬಿಕೆಯೂ ಇದೆ.

Facebook Comments