‘ಮಹಾ’ ತ್ರಿಪಕ್ಷ ಸರ್ಕಾರದ ಸಚಿವರ ಹೆಸರು ಫೈನಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.22- ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಗಧಿ ಮೈತ್ರಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ. ತ್ರಿಪಕ್ಷಗಳ ಹೊಸ ಸರ್ಕಾರದ ಸಂಪುಟದಲ್ಲಿ ಕಾರ್ಯ ನಿರ್ವಹಿಸಲಿರುವ ಸಚಿವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಹೊಸ ಸೂತ್ರದ ಪ್ರಕಾರ ಶಿವಸೇನೆ ಮತ್ತು ಎನ್‍ಸಿಪಿ ತಲಾ 15 ಸಚಿವರನ್ನು ಹೊಂದಲಿದೆ. ಕಾಂಗ್ರೆಸ್‍ಗೆ 12 ಮಂತ್ರಿ ಹುದ್ದೆಗಳು ಲಭಿಸಲಿವೆ. ನಿರೀಕ್ಷೆಯಂತೆ ಶಿವಸೇನೆ ಮುಖ್ಯಸ್ಥ ಉದ್ದವ್‍ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ.ಎನ್‍ಸಿಪಿ ನಾಯಕ ಅಜಿತ್‍ಪವಾರ್ ಮತ್ತು ಕಾಂಗ್ರೆಸ್‍ನ ಬಾಳಸಾಹೇಬ್ ತೋರಟ್ ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಲ್ಲದೆ, ಇವರಿಬ್ಬರ ಹೆಸರುಗಳನ್ನು ಸಂಪುಟ ದರ್ಜೆ ಸಚಿವ ಸ್ಥಾನಕ್ಕೂ ಪರಿಗಣಿಸುವ ಸಾಧ್ಯತೆ ಇದೆ. ಶಿವಸೇನೆಯಿಂದ ಸಚಿವರಾಗಲಿರುವ 15 ಮಂದಿಯಲ್ಲಿ 10 ಮಂದಿಯ ಹೆಸರನ್ನು ಈಗಾಗೇ ಅಂತಿಮಗೊಳಿಸಲಾಗಿದೆ. ಏಕನಾಥ್‍ಶಿಂಧೆ, ದಿವಾಕರ್ ರಾವ್ಟೆ, ಸುಭಾಷ್ ದೇಸಾಯಿ, ರಾಮದಾಸ್ ಕದಂ, ಅನಿಲ್‍ಪರಬ್, ಸುನಿಲ್ ಸಾವತ್, ಅಬ್ದುಲ್ ಸತ್ತಾರ್, ಸುನಿಲ್ ಪ್ರಭು, ಪ್ರತಾಬ್ ಸರ್‍ನಾಯಕ್ ಮತ್ತು ರವೀಂದ್ರ ವೈಕ್ಕರ್ ಸಚಿವರಾಗುವುದು ಬಹುತೇಕ ಖಚಿತ.

ಎನ್‍ಸಿಪಿಯಿಂದ ಅಜಿತ್ ಪವಾರ್ (ಡಿಸಿಎಂ), ಛಗನ್ ಬುಜ್ಬಲ್, ಜಯಂತ್‍ಪಾಟೀಲ್, ನವಾಬ್ ಮಲ್ಲಿಕ್, ರಾಜೇಶ್ ತೋಪ್, ಅನಿಲ್ ದೇಸ್ಮುಖ್, ಧನಯಂಜಯ್ ಮುಂಡೆ, ಅಸನ್ ಮುಷ್ರಿಫ್, ಜಿತೇಂದ್ರ ಅಹವದ್ ಮತ್ತು ದಿಲೀಪ್ ಪಾಟೀಲ್ ಅವರು ಹೆಸರುಗಳನ್ನು ಸಚಿವ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್‍ನಿಂದ ಸಚಿವರಾಗಲಿರುವ 12 ಶಾಸಕರಲ್ಲಿ 7ಜನರನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಅವುರಗಳೆಂದರೆ ಬಾಳಸಾಹೇಬ್ ತೋರಟ್ (ಡಿಸಿಎಂ), ಅಶೋಕ್ ಚೌವ್ಹಾಣ್, ಮಾಣಿಕ್‍ರಾವ್ ಠಾಕ್ರೆ, ಯಶೋಮತಿ ಠಾಕೂರ್, ಅಮಿದ್ ದೇಸ್ಮುಖ್, ವಿಜಯ್‍ವಡೆಂಟಿವಾರ್, ವರ್ಷಾಗಾಯಕವಾಡ್ ಅವರು ಮಂತ್ರಿಯಾಗಲಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಪ್ರಥ್ವಿರಾವ್ ಚೌವ್ಹಾಣ್ ಅವರಿಗೆ ಮಂತ್ರಿ ಹುದ್ದೆ ಬದಲಿಗೆ ವಿಧಾನಸಭಾ ಸ್ಪೀಕರ್‍ಸ್ಥಾನ ನೀಡಲಾಗುತ್ತದೆ. ಶಿವಸೇನೆಯ ಹಿರಿಯ ನಾಯಕರೊಬ್ಬರು ಡೆಪ್ಯುಟಿ ಸ್ಪೀಕರ್ ಆಗಲಿದ್ದಾರೆ. ವಿಧಾನಪರಿಷತ್ ಸಭಾಪತಿ ಸ್ಥಾನ ಎನ್‍ಸಿಪಿ ಪಾಲಾಗಲಿದ್ದು, ಉಪ ಸಭಾಪತಿಯಾಗಿ ಶಿವಸೇನೆಯ ನಾಯಕರೊಬ್ಬರು ಆಯ್ಕೆಯಾಗಲಿದ್ದಾರೆ.

Facebook Comments