ನಾಳೆ ‘ಮಹಾ’ನಾಟಕಕ್ಕೆ ತೆರೆ, 30:30 ಅನುಪಾತದಲ್ಲಿ ಹೊಸ ಮೈತ್ರಿ ಸರ್ಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.21- ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಒಂದು ತಿಂಗಳ ಕಾಲ ನಡೆದಿದ್ದ ರಾಜಕೀಯ ಹೈಡ್ರಾಮಾಕ್ಕೆ ನಾಳೆ ಅಂತಿಮ ತೆರೆ ಬೀಳಲಿದ್ದು , ಬಿಜೆಪಿಯೇತರ ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯ ಮಾತುಕತೆಗಳನ್ನು ಅಂತಿಮಗೊಳಿಸಿದ್ದು ಎಂದು ಹೇಳಲಾಗುತ್ತಿದ್ದು ನಾಲ್ಕು ವಾರಗಳ ರಾಜಕೀಯ ಅನಿಶ್ಚಿತತೆ ನಾಳೆ ಪೂರ್ಣ ವಿರಾಮ ಬೀಳಲಿದೆ.

ಈ ಕುರಿತು ಮೂರೂ ಪಕ್ಷಗಳು ನಾಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇಂದು ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಕಾಂಗ್ರೆಸ್ ಪಕ್ಷ ಭೇಟಿಯಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇಂದಿನವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶಿವಸೇನೆ ಮತ್ತು ಎನ್‌ಸಿಪಿ ತಲಾ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದಾಯನ್ನು ವಹಿಸಿಕೊಳ್ಳಲಿದ್ದು, ಯಾವ ಪಕ್ಷ ಮೊದಲು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲಿದೆ ಎಂದು ಸ್ಪಷ್ಟವಾಗಿಲ್ಲ.

ಇನ್ನೊಂದು ಮೂಲಗಳ ಪ್ರಕಾರ ಶೇ.30:30 ಅನುಪಾತದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಎನ್‍ಸಿಪಿಗೆ ಮೊದಲು ಮುಖ್ಯಮಂತ್ರಿ ಸ್ಥಾನ ಲಭ್ಯವಾಗಲಿದ್ದು ಶರದ್ ಪವಾರ್ ಅಥವಾ ಅವರ ಪುತ್ರಿ ಸುಪ್ರಿಯಾ ಸುಳೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅಸಮಾಧಾನದ ಹೊಗೆ: ಬಿಜೆಪಿ ಜತೆ ಇಷ್ಟು ವರ್ಷ ಮೈತ್ರಿ ಮುಂದುವರೆಸಿದ್ದ ಶಿವಸೇನೆ ಈಗ ಎನ್‍ಸಿಪಿ-ಕಾಂಗ್ರೆಸ್ ಜತೆ ಮೈತ್ರಿ ಹೊಂದಿರುವುದು ಆ ಪಕ್ಷದ ಕೆಲವು ಶಾಸಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಪರ ಒಲವು ಹೊಂದಿರುವ ಕೆಲ ಶಾಸಕರಿಗೆ ಶಿವಸೇನೆ ಎನ್‍ಸಿಪಿ ಮತ್ತು ಕಾಂಗ್ರೆಸ್ ಜತೆ ಸಂಬಂಧ ಬೆಳೆಸಿರುವುದು ಇಷ್ಟವಿಲ್ಲ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಭಯದಿಂದ ಕೆಲ ಶಾಸಕರು ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳಲೂ ಆಗದೆ ಒಳಗೊಳಗೇ ಅಸಮಾಧಾನದಿಂದ ನಲುಗುತ್ತಿದ್ದಾರೆ.

ಈ ಹಿಂದೆ ಕೂಡ ಶಿವಸೇನೆಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದ ಸಂದರ್ಭದಲ್ಲಿ ಠಾಕ್ರೆ ಅತ್ಯಂತ ಕಠಿಣ ನಿರ್ಧಾರದ ಮೂಲಕ ಭಿನ್ನಮತವನ್ನು ಮಟ್ಟ ಹಾಕಿದರು. ಆ ಭಯ ಶಾಸಕರನ್ನು ಕಾಡುತ್ತಿರುವುದರಿಂದ ಹೊಸ ಮೈತ್ರಿ ಶಿವಸೇನೆಯ ಕೆಲ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

Facebook Comments