ನಾಳೆಯಿಂದ ಮಹದೇಶ್ವರ ದರ್ಶನಕ್ಕೆ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ, ಜೂ. 18- ಲಾಕ್‍ಡೌನ್ ಸಡಿಲಿಕೆ ನಂತರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರೂ ಕೂಡ ಮಹದೇಶ್ವರ ಬೆಟ್ಟದಲ್ಲಿ ಮತ್ತೆ 3 ದಿನ ದರ್ಶನಕ್ಕೆ ಬ್ರೇಕ್ ಬಿದ್ದಿದೆ.

ಸರ್ಕಾರದ ಆದೇಶದಂತೆ ಇತ್ತೀಚೆಗೆ ಮಲೈ ಮಹದೇಶ್ವರನ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಭಕ್ತರ ಆರೋಗ್ಯ ದೃಷ್ಟಿಯಿಂದಾಗಿ ದೇವಾಲಯದಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ನಾಳೆಯಿಂದ ಜೂನ್ 21ರವರೆಗೆ ಮಹದೇಶ್ವರನ ದರ್ಶನ ಭಾಗ್ಯಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ನಾಳೆ ಮಹದೇಶ್ವರನಿಗೆ ಎಣ್ಣೆ ಮಜ್ಜನ, ಜೂ. 20 ಹಾಗೂ 21 ರಂದು ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಅಂಗವಾಗಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ, ಈ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುವುದರಿಂದ ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಈ ಆದೇಶವನ್ನು ಹೊರಡಿಸಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆಯಾದರೂ ಜೂ.22ರ ನಂತರ ಭಕ್ತರಿಗೆ ಎಂದಿನಂತೆ ಮಹದೇಶ್ವರ ದರ್ಶನ ಭಾಗ್ಯ ಸಿಗಲಿದೆ ಎಂದು ಹೇಳಿದ್ದಾರೆ.

Facebook Comments