ಹರೀಶ್ ಜೊತೆ ಸಂಧಾನ ಸಕ್ಸಸ್, ಗೋಪಾಲಯ್ಯಗೆ ಬಂತು ‘ಪಕ್ಷ’ಬಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.16-ತೀವ್ರ ಕಗ್ಗಂಟಾಗಿ ಪರಿಣಿಮಿಸಿದ್ದ ಮಹಾಲಕ್ಷ್ಮಿ ಲೇಔಟ್‍ನ ಭಿನ್ನಮತ ಬಹುತೇಕ ನಿವಾರಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಕೆಲಸ ಮಾಡಲು ಪಕ್ಷದ ಮುಖಂಡರು ಸಮ್ಮತಿಸಿದ್ದಾರೆ.ಕೆ.ಗೋಪಾಲಯ್ಯ ಅವರಿಗೆ ಮಹಾಲಕ್ಷ್ಮಿ ಲೇಔಟ್‍ನಿಂದ ಟಿಕೆಟ್ ನೀಡಿದ ಪರಿಣಾಮ ಬಿಜೆಪಿ ಮುಖಂಡರಾದ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಮತ್ತಿತರರು ಮುನಿಸಿಕೊಂಡಿದ್ದರು.

ಅದರಲ್ಲೂ ಎಸ್.ಹರೀಶ್ ಅಂತೂ ಗೋಪಾಲಯ್ಯಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷದ ಅಭ್ಯರ್ಥಿ ಪರ ಬೆಂಬಲ ನೀಡುವ ಕುರಿತು ಆಪ್ತರ ಬಳಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.ಇದರಿಂದ ತುಸು ಬೆದರಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಚಿವರಾದ ವಿ.ಸೋಮಣ್ಣ, ಎಸ್.ಸುರೇಶ್‍ಕುಮಾರ್, ಪಕ್ಷದ ಮುಖಂಡರಾದ ಸುಬ್ಬಣ್ಣ ಸೇರಿದಂತೆ ಮತ್ತಿತರರು ಇಂದು ಬೆಳಗ್ಗೆ ರಾಜಾಜಿನಗರದಲ್ಲಿರುವ ಹರೀಶ್ ನಿವಾಸಕ್ಕೆ ತೆರಳಿ ಸಂಧಾನ ನಡೆಸಿದರು.

ಪಕ್ಷದ ಸೂಚನೆಯಂತೆ ಗೋಪಾಲಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ನಮ್ಮ ನಿಲುವು ಏನೇ ಇರಲಿ ಹೈಕಮಾಂಡ್ ತೀರ್ಮಾನವನ್ನು ವಿರೋಧಿಸುವುದು ಸರಿಯಲ್ಲ. ಪಕ್ಷದಲ್ಲಿ ನಿಮಗೆ ಮುಂದೆ ಉನ್ನತ ಸ್ಥಾನಮಾನ ನೀಡಲಾಗುವುದು. ಉಪಚುನಾವಣೆಯಲ್ಲಿ ನಮಗೆ ಒಂದೊಂದು ಸ್ಥಾನವೂ ಮಹತ್ವದಾಗಿರುವುದರಿಂದ ಅಭ್ಯರ್ಥಿ ಪರ ಕೆಲಸ ಮಾಡಲೇಬೇಕೆಂದು ಸದಾನಂದಗೌಡ ಮನವರಿಕೆ ಮಾಡಿದರು.

ಅಂತಿಮವಾಗಿ ವರಿಷ್ಠರ ಸೂಚನೆಯಂತೆ ಎಸ್.ಹರೀಶ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿದಿರುವ ಗೋಪಾಲಯ್ಯ ಪರ ಪ್ರಚಾರ ಮಾಡಿ ಗೆಲ್ಲಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ನಂತರ ಗೋಪಾಲಯ್ಯನವರ ಜೊತೆಯೇ ಹರೀಶ್ ತಿಂಡಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್, ಪಕ್ಷದ ತೀರ್ಮಾನದಂತೆ ನಾವು ಉಪಚುನಾವಣೆಯಲ್ಲಿ ಗೋಪಾಲಯ್ಯ ಪರವಾಗಿ ಕ್ಷೇತ್ರಾದ್ಯಂತ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸುತ್ತೇವೆ. ಸಣ್ಣಪುಟ್ಟ ಗೊಂದಲ ಇದ್ದದು ನಿಜ.

ಆದರೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿದೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯ ಎಂದರು. ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಅತಿಹೆಚ್ಚು ಬಹುಮತದಿಂದ ಗೋಪಾಲಯ್ಯನವರನ್ನು ಗೆಲ್ಲಿಸಿಕೊಡುವುದು ನಮ್ಮ ಜವಾಬ್ದಾರಿ. ಕ್ಷೇತ್ರಾದ್ಯಂತ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಸಚಿವ ಸೋಮಣ್ಣ ಮಾತನಾಡಿ, ಈ ಕ್ಷೇತ್ರದಲ್ಲಿ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ. ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲಾಗಿದೆ. ಹರೀಶ್ ಸೇರಿದಂತೆ ಎಲ್ಲರೂ ಗೋಪಾಲಯ್ಯನವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಲಾಗುವುದು ಎಂದು ಹೇಳಿದರು.

Facebook Comments

Sri Raghav

Admin