ಭಾರಿ ಮಳೆಯಿಂದ ತ್ರಿಶಂಕು ಸ್ಥಿತಿಯಲ್ಲಿ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು, ಪ್ರಯಾಣಿಕರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.27- ಮಹಾರಾಷ್ಟ್ರದಲ್ಲಿ ಭಾರೀ ವರ್ಷಧಾರಿಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಥಾಣೆ ಜಿಲ್ಲೆಯ ಬದ್ಲಾಪುರ್ ಮತ್ತು ವೇಂಗಣಿ ಮಹಾಲಕ್ಷ್ಮಿ ಎಕ್ಸ್‍ಪ್ರೆಸ್ ರೈಲು ತ್ರಿಶಂಕು ಸ್ಥಿತಿಯಲ್ಲಿರುವುದರಿಂದ 1000ಕ್ಕೂ ಪ್ರಯಾಣಿಕರು ಪರದಾಡುವಂತಾಯಿತು.

ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹೆಲಿಕಾಪ್ಟರ್‍ಗಳನ್ನು ಬಳಸಲು ಸೇನೆಯ ನೆರವು ಕೋರಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕೆಲವು ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ, ಇನ್ನು ಕೆಲವು ವಿಮಾನ ಹಾರಾಟದ ಅವಧಿಯನ್ನು ಮುಂದೂಡಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಮಳೆಗೆ ಸಿಲುಕಿಕೊಂಡಿರುವ 1000 ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಎಂಟು ಬೋಟ್‍ಗಳು ಮೂರು ನುರಿತ ಮುಳುಗು ತಜ್ಞರ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಗಾಳಿತುಂಬಿದ ಹಗುರ ಬೋಟ್‍ಗಳು, ಜೀವರಕ್ಷಕ ಜಾಕೆಟ್‍ಗಳು ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ವೈದ್ಯರ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಪ್ರಯಾಣಿಕರ ರಕ್ಷಣೆಗಾಗಿ ಹೆಲಿಕಾಪ್ಟರ್‍ಗಳನ್ನು ಬಳಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಮಹಾನಿರ್ದೇಶನಾಲಯದ ಉನ್ನತ ಅಧಿಕಾರಿ ಬ್ರಿಜೆಶ್ ಮಿಶ್ರ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಬಿಸ್ಕೆಟ್, ನೀರು ಇತ್ಯಾದಿ ಸೌಲಭ್ಯಗಳನ್ನು ಸ್ಥಳೀಯ ಪೊಲೀಸರು ಒದಗಿಸುತ್ತಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರ ತೀರಗಳಿಗೆ ಹೋಗಬಾರದೆಂದು ಸೂಚನೆ ಕೂಡ ನೀಡಲಾಗಿದೆ.

ನಿನ್ನೆ ಸುರಿದ ಮಳೆಗೆ ಚೆಂಬೂರು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿದ್ದು, ಅಲ್ಲಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿದೆ. ಇದರಿಂದಾಗಿ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

 

ಸೈಯಾನ್, ಮಾತುಂಗ, ಮಹಿಮ್, ಅಂಧೇರಿ, ಮಲಾದ್ ಮತ್ತು ದಹೀಸರ್ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿವೆ. ರಸ್ತೆಗಳಲ್ಲಿ 3 ಅಡಿಗೂ ಮೇಲ್ಪಟ್ಟದಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರಕ್ಕೆ ಭಾರೀ ಅಡ್ಡಿಯುಂಟಾಗಿದೆ.

ನಿನ್ನೆ ಬೆಳಗ್ಗೆ 6.30ರಿಂದ ಮಳೆ ಸುರಿಯುತ್ತಿದ್ದು, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾತ್ರಿ ಮತ್ತು ಬೆಳಗ್ಗೆ ಸಮಯದಲ್ಲಿ ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆಯಾಗಿದೆ. ಇನ್ನು ನಾಲ್ಕು ದಿನಗಳ ಕಾಲ ವರುಣನ ಆರ್ಭಟ ಮುಂದುವರೆಯಲಿದೆ. ಇಂದು ಕೂಡ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Facebook Comments

Sri Raghav

Admin