‘ನನ್ನ ನಿಂದಿಸಿದ ಕಲಬೆರಕೆ ಪಕ್ಷಗಳಿಗೆ ಮತದಾರರೇ ದಿಟ್ಟ ಉತ್ತರ ನೀಡಲಿದ್ದಾರೆ.` ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಬಲಿಯಾ(ಉ.ಪ್ರ), ಮೇ 14-ನನ್ನನ್ನು ನಿರಂತರವಾಗಿ ನಿಂದಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ಕಲಬೆರಕೆ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರೇ ದಿಟ್ಟ ಉತ್ತರ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೇ 19 ರಂದು ನಡೆಯಲಿರುವ ಏಳನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದ ಬಲಿಯಾದಲ್ಲಿಂದು ಭರ್ಜರಿ ರ್ಯಾಲಿ ನಡೆಸಿದ ಮೋದಿ ಪ್ರತಿಪಕ್ಷಗಳ ವಿರುದ್ಧ ತೀಕ್ಷ್ಣ ವಾಕ್‍ಪ್ರಹಾರ ಮಾಡಿದರು.

ಈ ಕಲಬೆರಕೆ ಮುಖಂಡರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಡವರ ಹಣವನ್ನು ಲೂಟಿ ಮಾಡಿ ತಮಗೆ ಮತ್ತು ತಮ್ಮ ಕುಟುಂಬ ವರ್ಗದವರಿಗೆ ಭವ್ಯ ಬಂಗಲೆ ಮತ್ತು ಅರಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಮೋದಿ ಆರೋಪಿಸಿದರು.

ನಾನು ಬೇನಾಮಿ ಆಸ್ತಿಯನ್ನಾಗಲಿ ಅಥವಾ ತೋಟದ ಮನೆಯನ್ನಾಗಲಿ ಇಲ್ಲವೆ, ವಿದೇಶಿ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ಒಂದೇ ಒಂದು ಪ್ರಕರಣವನ್ನು ವಿರೋಧ ಪಕ್ಷಗಳು ಸಾಬೀತು ಮಾಡಲಿ ಎಂದು ಪ್ರಧಾನಿ ಸವಾಲು ಹಾಕಿದರು.

ಈ ಹಿಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಕಿತ್ತಾಡಿಕೊಂಡಿದ್ದ ಈ ಪಕ್ಷಗಳು ಈಗ ಅಧಿಕಾರ ಗಳಿಕೆ ಮತ್ತು ಸ್ವಾರ್ಥಕ್ಕಾಗಿ ಒಗ್ಗೂಡಿವೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಈ ಪಕ್ಷಗಳು ಮತ್ತೆ ದೊಡ್ಡ ಮಟ್ಟದಲ್ಲಿ ಕಿತ್ತಾಡುತ್ತವೆ ಎಂದು ಮೋದಿ ಲೇವಡಿ ಮಾಡಿದರು.

ಬಿಎಸ್‍ಪಿ ನಾಯಕಿ ಮಾಯಾವತಿ ಮತ್ತು ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ಇವರಿಬ್ಬರೂ ಜಾತಿ ರಾಜಕಾರಣಿಗಳು.ಸ್ವಾರ್ಥಕ್ಕಾಗಿ ಒಗ್ಗೂಡಿದ್ದಾರೆ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಇವರಿಬ್ಬರಿಗಿಂತ ಹೆಚ್ಚಿನ ಕಾಲ ಸಮರ್ಥ ಮತ್ತು ದಕ್ಷ ಆಡಳಿತ ನೀಡಿದ್ದೇನೆ. ಆದರೆ ಎಂದಿಗೂ ನಾನು ಇವರಂತೆ ಜಾತಿ ರಾಜಕಾರಣ ಅಥವಾ ಸ್ವಜನಪಕ್ಷಪಾತ ಮಾಡಿಲ್ಲ ಎಂದು ಮೋದಿ ಹೇಳಿದರು.

Facebook Comments