ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ನ.4- ಕೋವಿಡ್ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ದಿಸೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನಗರದ ವಿವಿಧ ಪ್ರದೇಶಗಳಿಗೆ ತೆರಳಿ, ಮಾಸ್ಕ್ ಹಾಕದವರಿಗೆ ಸ್ಥಳದಲ್ಲಿಯೇ ದಂಡ ಹಾಕಿಸಿದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ನಗರದ ಪ್ರಮುಖ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಮಾಸ್ಕ್ ಅಭಿಯಾನ ನಡೆಸಿತು. ಅಲ್ಲದೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಬುದ್ದಿವಾದ ಹೇಳಿದ ಜಿಲ್ಲಾಧಿಕಾರಿಗಳು, ಈ ರೀತಿ ನಿರ್ಲಕ್ಷ  ತೋರಿದರೆ ಕೊರೊನಾ ರೋಗ ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ ಎಂದು ತಿಳಿ ಹೇಳಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಬೇಕು ಎಂದ ಅವರು, ಮಾಸ್ಕ್ ಧರಿಸದವರನ್ನು ಖುದ್ದು ಗುರುತಿಸಿ, ಅಂತಹವರಿಗೆ ಸ್ಥಳದಲ್ಲಿಯೇ ದಂಡ ಪಾವತಿಸುವಂತೆ ಸೂಚಿಸಿದರಲ್ಲದೆ ಮಾಸ್ಕ್ ವಿತರಿಸಿದರು. ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ವ್ಯಾಪಾರಸ್ಥರನ್ನು ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಕೆಲ ವಾಹನ ಸವಾರರನ್ನು ತಡೆದು ದಂಡ ವಿಧಿಸಲಾಯಿತು.

ಹಲವು ಅಂಗಡಿಗಳ ಒಳಗೆ ಪ್ರವೇಶಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ಅಂಗಡಿಗಳ ಮಾಲೀಕರು, ಕೆಲಸಗಾರರು ಮಾಸ್ಕ್ ಧರಿಸದೆ ವ್ಯಾಪಾರ ಚಟುವಟಿಕೆ ನಡೆಸುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇಂತಹವರಿಗೆ ಹೆಚ್ಚಿನ ದಂಡ ವಿಧಿಸುವುದು ಅಗತ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.

ನಗರದ ಗಡಿಯಾರ ಕಂಬದಿಂದ ಪ್ರಾರಂಭವಾದ ಮಾಸ್ಕ್ ಅಭಿಯಾನವು, ನಂತರ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಎನ್.ಆರ್. ರಸ್ತೆ, ಕೆ.ಆರ್. ರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿ, ಪಾದಚಾರಿಗಳು, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಜ್ಯೂವೆಲರಿ ಶಾಪ್‍ಗಳು, ಅಲ್ಲದೆ ಹೋಲ್ಸೇಲ್ ಮತ್ತು ರೀಟೇಲ್ ಶಾಪ್‍ಗಳಿಗೂ ತೆರಳಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಯಿತು. ಪೊಲೀಸ್ ಇಲಾಖೆ ಹಾಗೂ ನಗರಪಾಲಿಕೆ ಕಚೇರಿಯ ವತಿಯಿಂದ ಅಧಿಕಾರಿ, ಸಿಬ್ಬಂದಿಗಳು ದಂಡದ ಮೊತ್ತ ಸಂಗ್ರಹಿಸಿ, ರಸೀದಿ ನೀಡುವಲ್ಲಿ ನಿರತರಾಗಿದ್ದು ಕಂಡುಬಂದಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಮಾಸ್ಕ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Facebook Comments