ಪಾಕ್‍ನಲ್ಲಿ ಪ್ರಥಮ ಸಿಖ್ ಚಕ್ರವರ್ತಿ ರಣಜಿತ್ ಸಿಂಗ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಲಾಹೋರ್,ಆ.11-ಪ್ರಥಮ ಸಿಖ್ ಚಕ್ರವರ್ತಿ ಮಹಾರಾಜ ರಣಜಿತ್ ಸಿಂಗ್ ಅವರ 9 ಅಡಿಗಳಷ್ಟು ಎತ್ತರದ ಅಶ್ವರೂಢ ಹಿತ್ತಾಳೆ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಪಾಕಿಸ್ತಾನದ ಲಾಹೋರ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಈ ಸಂಬಂಧ ಇಬ್ಬರು ದುಷ್ಕರ್ಮಿಗಳನ್ನು ಲಾಹೋರ್ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮಹಾರಾಜ ಅವರ 180ನೇ ಜನ್ಮ ಜಯಂತಿ ಪ್ರಯುಕ್ತ ಕಳೆದ ಜೂನ್‍ನಲ್ಲಷ್ಟೇ ಈ ಪುತ್ಥಳಿಯನ್ನು ಅನಾವರಣಗೊಳಿಸಲಾಗಿತ್ತು.

19ನೇ ಶತಮಾನದ ಮಧ್ಯಭಾಗದಲ್ಲಿ ವಾಯುವ್ಯ ಉಪಖಂಡವನ್ನು ಆಳಿದ್ದ ಮಹಾರಾಜ ರಣಜಿತ್ ಸಿಂಗ್ ಶೌರ್ಯ, ಪರಾಕ್ರಮ ಮತ್ತು ಔದಾರ್ಯಕ್ಕೆ ಹೆಸರಾಗಿದ್ದರು. 1839ರಲ್ಲಿ ಅವರು ಮೃತಪಟ್ಟವರು. ಅವರ ಗೌರವಾರ್ಥ ಪಾಕಿಸ್ತಾನದ ಲಾಹೋರ್‍ನಲ್ಲಿ (ಆಗ ವಾಯುವ್ಯ ಉಪಖಂಡಕ್ಕೆ ಸೇರಿದ ಪ್ರಾಂತ್ಯ) ಕೈಯಲ್ಲಿ ಖಡ್ಗ ಹಿಡಿದು ಯುದ್ಧಕ್ಕೆ ಸನ್ನದ್ದವಾಗಿರುವ ಅಶ್ವರೂಢ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಲಾಗಿತ್ತು.

ಲಾಹೋರ್‍ನ ಪ್ರತ್ಯೇಕತಾವಾದಿ ಸಂಘಟನೆಯ ಇಬ್ಬರು ದುಷ್ಕರ್ಮಿಗಳು ಈ ಪುತ್ಥಳಿಯನ್ನು ಧ್ವಂಸಗೊಳಿಸಿದ್ದಾರೆ. ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಆಕ್ರೋಶ ವ್ಯಕ್ತಪಡಿಸಿ ತಾವು ಈ ಕೃತ್ಯವೆಸಗಿರುವುದಾಗಿ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments