ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

# ಮಹಾರಾಷ್ಟ್ರದಲ್ಲಿ ಮತ್ತೆ ‘ದೇವೇಂದ್ರ-ಸೇನೆ’ಯ ದರ್ಬಾರ್ ಮುಂದುವರಿಕೆ..!
ಮುಂಬೈ,ಅ.24- ನಿರೀಕ್ಷೆಯಂತೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 180 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 2ನೇ ಅವಧಿಗೆ ಅಧಿಕಾರದ ದಾಪುಗಾಲಿಟ್ಟಿವೆ.

ಕಾಂಗ್ರೆಸ್ ಎನ್‍ಸಿಪಿ ನೇತೃತ್ವದ ಯುಪಿಎ ಮೈತ್ರಿಕೂಟ ಕೇವಲ 90 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, 20 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ಸನಿಹದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 145 ಸ್ಥಾನಗಳ ಅಗತ್ಯವಿದೆ. ಚುನಾವಣೆಗೂ ಮುನ್ನವೇ ಬಿಜೆಪಿ, ಶಿವಸೇನೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿದ್ದರಿಂದ ಪುನಃ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಈ ಬಾರಿ ಬಿಜೆಪಿ 107, ಶಿವಸೇನೆ 73 , ಕಾಂಗ್ರೆಸ್ 39, ಎನ್‍ಸಿಪಿ 50 ಹಾಗೂ ಪಕ್ಷೇತರರು 19 ಕ್ಷೇತ್ರಗಳಲ್ಲಿ ಗೆಲುವಿನತ್ತ ಮುನುಗ್ಗಿದ್ದಾರೆ. ಆದರೆ 2014ರಲ್ಲಿ ಗೆದ್ದ ಸ್ಥಾನಕ್ಕೂ ಈಗ ಗೆದ್ದಿರುವ ಸ್ಥಾನಕ್ಕೂ ಹೋಲಿಕೆ ಮಾಡಿದರೆ ಬಿಜೆಪಿಗೆ ಕೊಂಚ ಹಿನ್ನಡೆಯಾಗಿರುವುದು ಕಂಡುಬಂದಿದೆ. 2014ರ ಚುನಾವಣೆಯಲ್ಲಿ ಬಿಜೆಪಿ- 122, ಶಿವಸೇನೆ -63 ಸ್ಥಾನಗಳನ್ನು ಗಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಸಿಕ್ಕಿಲ್ಲ.

ರಾಜ್ಯದಲ್ಲಿ ಹೆಚ್ಚಾದ ರೈತರ ಆತ್ಮಹತ್ಯೆ, ನಿರುದ್ಯೋಗ, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದು, ವಿದರ್ಬದಲ್ಲಿ ಉಂಟಾದ ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವೈಫಲ್ಯ ಸೇರಿದಂತೆ ಹತ್ತು ಹಲವು ಪ್ರಚಲಿತ ಸಮಸ್ಯೆಗಳು ಬಿಜೆಪಿಗೆ ಮೊಗ್ಗಲು ಮುಳ್ಳಾಗಿವೆ.ವಾಸ್ತವವಾಗಿ ಬಿಜೆಪಿ ಸ್ಪರ್ಧಿಸಿದ್ದ 162 ಕ್ಷೇತ್ರಗಳ ಪೈಕಿ 145 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿತ್ತು. ಹೀಗಾಗಿಯೇ ಮೋದಿ,ಅಮಿತ್ ಷಾ ಜೋಡಿ ಭರ್ಜರಿ ಪ್ರಚಾರವನ್ನು ನಡೆಸಿ ಮತದಾರರ ಮನವೊಲಿಸಿದ್ದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯಾದ್ಯಂತ ನಡೆಸಿದ ಜನಾಶೀರ್ವಾದ ಯಾತ್ರೆಯೂ ಪಕ್ಷಕ್ಕೆ ಹೇಳಿಕೊಳ್ಳುವಂತಹ ಲಾಭ ತಂದುಕೊಟ್ಟಿಲ್ಲ.ನಾಗ್ಪುರ ನೈರುತ್ಯವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾರೀ ಮುನ್ನಡೆಯಲ್ಲಿದ್ದಾರೆ. ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ವರ್ಲಿ, ಮಾಜಿ ಸಿಎಂಗಳಾದ ಅಶೋಕ್ ಚವ್ಹಾಣ್( ಬೋಕರ್), ಪೃಥ್ವಿರಾಜ್ ಚವ್ಹಾಣ್(ಖರದ್), ಅಜಿತ್ ಪವಾರ್(ಭಾರಾಮತಿ) ಗೆಲುವಿನತ್ತ ಮುನ್ನುಗ್ಗಿದ್ದಾರೆ.

ಲಾಥೂರ್ ನಗರದಲ್ಲಿ ಅಮಿತ್ ವಿಲಾಸ್‍ರಾವ್ ದೇಶ್‍ಮುಖ್, ಕೊತರುಡ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ಲಾಥೂರ್ ಗ್ರಾಮೀಣದಲ್ಲಿ ಧೀರಜ್ ವಿಲಾಸ್‍ರಾವ್ ದೇಶ್‍ಮುಖ್, ಸೋಲಾಪುರ ನಗರ ಕೇಂದ್ರದಲ್ಲಿ ಕೇಂದ್ರ ಮಾಜಿ ಸಚಿವ ಸುಶೀಲ್‍ಕುಮಾರ್ ಶಿಂಧೆ ಪುತ್ರಿ ಪ್ರಣಿತಿ ಶಿಂಧೆ ಹಿನ್ನಡೆಯಲ್ಲಿದ್ದಾರೆ.

ಕೇಂದ್ರದ ಮಾಜಿ ಸಚಿವ ದಿವಂಗತ ಗೋಪಿನಾಥ್ ಮುಂಡೇ ಪುತ್ರಿ ಹಾಗೂ ಸಚಿವೆ ಪಂಕಜ್ ಮುಂಡೇ(ಪರ್ಲಿ) ಹಿನ್ನಡೆಯಲ್ಲಿದ್ದರೆ, ಸುಹಾಸ್ ಬರಾಲ(ತೊಹನಾ)ಸಹ ಸೋಲಿನ ಅಂಚಿನಲ್ಲಿದ್ದಾರೆ. ಎನ್‍ಸಿಪಿ ಮುಖಂಡ ಶರದ್ ಪವಾರ್ ಮೊಮ್ಮಗ ರೋಹಿತ್ ಪವಾರ್(ಖರ್ಜತ್ ಜಮ್‍ಖೇಡ್) ಮುನ್ನಡೆಯಲ್ಲಿದ್ದಾರೆ. ದೇವೇಂದ್ರ ಫಡ್ನವೀಸ್ ಸಂಪುಟದ ಕೆಲವು ಸಚಿವರಿಗೆ ಸೋಲಿನ ಭೀತಿ ಎದುರಾಗಿದೆ.ವಿದರ್ಭ ಪ್ರಾಂತ್ಯದಲ್ಲಿ ಎಂದಿನಂತೆ ಎನ್‍ಸಿಪಿ ಪ್ರಾಬಲ್ಯ ಸಾಧಿಸಿದ್ದರೆ, ಕೊಂಕಣ್, ಮರಾಠವಾಡ, ಮಾಲ್ವಾದಲ್ಲಿ ಬಿಜೆಪಿ ಹಾಗೂ ಶಿವಸೇನೆ ಸಮಬಲದಲ್ಲಿವೆ. ನಾಂದೇಡ್‍ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.

#  ಮುಖ್ಯಮಂತ್ರಿ ಸ್ಥಾನ ಯಾರಿಗೆ?:
ರಾಜ್ಯದಲ್ಲಿ ಬಿಜೆಪಿ ಈ ಬಾರಿ ಕಡಿಮೆ ಸ್ಥಾನ ಗಳಿಸುತ್ತಿದ್ದಂತೆ ಶಿವಸೇನೆ ಹೊಸ ಆಟ ಶುರು ಮಾಡಿದೆ. ಮೊದಲಿನಿಂದಲೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಸೇನೆಯು ತನಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಬಿಜೆಪಿ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.

ಶಿವಸೇನೆಯ ಕಾರ್ಯಾಧ್ಯಕ್ಷ ಹಾಗೂ ಯುವ ನಾಯಕ ಆದಿತ್ಯ ಠಾಕ್ರೆಗೆ ಸಿಎಂ ಪಟ್ಟ ಕಟ್ಟಲು ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ. ಆದರೆ ದೊಡ್ಡಣ್ಣನ ಸ್ಥಾನದಲ್ಲಿರುವ ಬಿಜೆಪಿ ಸುಲಭವಾಗಿ ಅಧಿಕಾರವನ್ನು ಬಿಟ್ಟು ಕೊಡುವುದೇ ಎಂಬ ಪ್ರಶ್ನೆ ಎದುರಾಗಿದೆ.

ಒಂದು ವೇಳೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮುಂದಾದರೆ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಆದರೆ ಉಗ್ರ ಹಿಂದುತ್ವವನ್ನೇ ಪ್ರತಿಪಾದಿಸುವ ಶಿವಸೇನೆ ಜೊತೆ ಕಾಂಗ್ರೆಸ್ , ಎನ್‍ಸಿಪಿ ಕೈ ಜೋಡಿಸಲಿವೆ ಎಂಬ ಪ್ರಶ್ನೆಯೂ ಎದುರಾಗಿದೆ.

# ಹರಿಯಾಣದಲ್ಲಿ ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ಪೈಪೋಟಿ
ಚಂಡೀಗಢ, ಅ.24-ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೆ ಸರ್ಕಾರ ರಚನೆಗೆ ಅಗತ್ಯವಾದಷ್ಟು ಸ್ಪಷ್ಟ ಬಹುಮತ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಅನ್ಯ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ರಚನೆಗೆ ಭಾರೀ ಪೈಪೋಟಿ ನಡೆಸುತ್ತಿವೆ.

90 ಸದಸ್ಯ ಬಲದ ಹರಿಯಾಣದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ. ಆದರೆ ಮುಖ್ಯಮಂತ್ರಿ ಮನೋಹರ್‍ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ 44 ಸ್ಥಾನಗಳನ್ನು ಗಳಿಸಿದ್ದು, ಮ್ಯಾಜಿಕ್ ನಂಬರ್‍ಗೆ ಕೇವಲ 2 ಸ್ಥಾನಗಳ ಕೊರತೆ ಇದೆ. ಕಾಂಗ್ರೆಸ್ 29 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಯುವನಾಯಕ ದುಷ್ಯಂತ್ ಚೌತಾಲಾ ನಾಯಕತ್ವದ ಜನನಾಯಕ ಜನತಾ ಪಕ್ಷ(ಜೆಜೆಪಿ) 8 ಸ್ಥಾನಗಳನ್ನು ಗಳಿಸಿ ಅಚ್ಚರಿ ಫಲಿತಾಂಶ ನೀಡಿದೆ. ಪಕ್ಷೇತರರು 9 ಸ್ಥಾನಗಳಲ್ಲಿ ಜಯಶೀಲರಾಗಿದ್ದಾರೆ.

ಹರಿಯಾಣದಲ್ಲಿ ಶತಾಯ-ಗತಾಯ ಸರ್ಕಾರ ರಚಿಸುವ ಉಮೇದಿನಲ್ಲಿರುವ ಬಿಜೆಪಿ, ಜೆಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದರೆ, ಇನ್ನೊಂದಡೆ ಜೆಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಹ ತೀವ್ರ ಕಸರತ್ತು ನಡೆಸಿದೆ. ಈ ಸಂಬಂಧ ದುಷ್ಯಂತ್ ಮನವೊಲಿಸಲು ಬಿಜೆಪಿ ತನ್ನ ಮಿತ್ರ ಪಕ್ಷ ಅಕಾಲಿದಳ ಬಾದಲ್ ಬಣದ ಮುಖಂಡರಿಗೆ ಇದರ ಹೊಣೆಯನ್ನು ಒಪ್ಪಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಧುರೀಣ ಭೂಪಿಂದರ ಸಿಂಗ್ ಹೂಡಾ ಅವರ ಪುತ್ರ ದೀಪಿಂದರ್ ಹೂಡಾ. ತಾವು ದುಷ್ಯಂತ್ ಜೊತೆ ಮಾತನಾಡಲು ಮುಂದಾಗಿದ್ದಾರೆ. ಆದರೆ ದುಷ್ಯಂತ್ ಚೌತಾಲಾ ಇಟ್ಟಿರುವ ಹೊಸ ಬೇಡಿಕೆ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ತಮಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಸ್ಥಾನವನ್ನು ತಮಗೆ ಬಿಟ್ಟು ಕೊಡುವ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ದ ಎಂದು ದುಷ್ಯಂತ್ ಹೇಳಿದ್ದಾರೆ. ಅದರೆ ಆದರೆ ಆ ಪಕ್ಷದ ಬೆಂಬಲ ಪಡೆದು ದುಷ್ಯಂತ್‍ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹಿಂದೇಟು ಹಾಕುತ್ತಿದೆ.

ಇದೇ ವೇಳೆ ಮುಖ್ಯಮಂತ್ರಿ ಮನೋಹರ್ ಖಟ್ಟರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಮಹತ್ವದ ಮಂತ್ರಾಲೋಚನೆ ನಡೆಸಿಸಿದ್ದಾರೆ. ಕಾದು ನೋಡುವ ತಂತ್ರ ಅನುಸರಿಸಲು ಬಿಜೆಪಿ ವರಿಷ್ಟರು ಖಟ್ಟರ್‍ಗೆ ಸೂಚನೆ ನೀಡಿದ್ದಾರೆ. ದುಷ್ಯಂತ್ ಮನವೊಲಿಕೆ ವಿಫಲವಾದರೆ ಇತರ ಪಕ್ಷಗಳ ಬೆಂಬಲ ಗಳಿಸುವ ಪರ್ಯಾಯ ಕಸರತ್ತಿಗೆ ಬಿಜೆಪಿ ಕಾರ್ಯೋನ್ಮುಖವಾಗಿದೆ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾದ ಸೂತ್ರದ ಮಾದರಿಯನ್ನು ಹರಿಯಾಣದಲ್ಲೂ ಅನ್ವಯಿಸಲು ಸಾಧ್ಯವೆ ಎಂಬ ಬಗ್ಗೆ ಕಾಂಗ್ರೆಸ್ ವರಿಷ್ಠರು ಈಗಾಗಲೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.  ಒಟ್ಟಾರೆ ಹರಿಯಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

ಖಟ್ಟರ್ ವಿರುದ್ಧ ಷಾ ಗರಂ: ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ಕೊರತೆ ಉಂಟಾಗಿರುವುದಕ್ಕೆ ಅಮಿತ್ ಷಾ ಗರಂ ಆಗಿದ್ದಾರೆ. ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿಂದು ಮಹತ್ವದ ಸಮಾಲೋಚನೆ ನಡೆಸಿ ಹರಿಯಾಣ ಚುನಾವಣಾ ಫಲಿತಾಂಶವನ್ನು ಪರಾಮರ್ಶಿಸಿದರು. ಮನೋಹರ್‍ಲಾಲ್ ಖಟ್ಟರ್‍ಗೆ ತಕ್ಷಣ ದೆಹಲಿಗೆ ಬರುವಂತೆ ಅಮಿತ್ ಷಾ ಸೂಚನೆ ನೀಡಿದ್ದಾರೆ.  ಎರಡು ಸ್ಥಾನಗಳನ್ನು ಪಡೆಯಲು ಬಿಜೆಪಿಗೆ ಕಷ್ಟವಾಗುವುದಿಲ್ಲ. ಆದರೆ, ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲು ಜೆಜೆಪಿ ಮತ್ತು ಇತರ ಪಕ್ಷಗಳ ಮೈತ್ರಿಗಾಗಿ ಹಾತೊರೆಯುತ್ತಿದೆ.

# ಸಿಎಂ, ಮಾಜಿ ಸಿಎಂ ಸೇರಿಂಡ್ಟ್ ಘಟಾನುಘಟಿಗಳ ಭರ್ಜರಿ ಗೆಲುವು  : 
ಮುಂಬೈ/ಚಂಡೀಗಢ, ಅ.24- ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ನಿರೀಕ್ಷೆಯಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ಘಟಾನುಘಟಿಗಳು ವಿಜೇತರಾಗಿದ್ದಾರೆ.ಮಹಾರಾಷ್ಟ್ರ: ಬಿಜೆಪಿ ಧುರೀಣ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ನಾಗ್ಪುರ ನೈರುತ್ಯ ಕ್ಷೇತ್ರದಿಂದ ಗೆಲುವು ದಾಖಲಿಸಿದ್ಧಾರೆ. ಅವರು ಕಾಂಗ್ರೆಸ್‍ನ ಅಶಿಶ್ ದೇಶ್‍ಮುಖ್ ಅವರನ್ನು 7,000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್ (ಕೊತ್ರುಡ್ ವಿಧಾನಸಭಾ ಕ್ಷೇತ್ರ), ಸಚಿವ ರಾಧಾಕೃಷ್ಣ ವಿಖೇ ಪಾಟೀಲ್(ಶಿರಡಿ), ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ (ಬೋಕರ್) ಮತ್ತು ಪೃಥ್ವಿರಾಜ್ ಚವಾಣ್(ಕರಡ್ ಸೌತ್), ಎನ್‍ಸಿಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್(ಬಾರಾಮತಿ), ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಒರ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ.

ಹರಿಯಾಣ: ಬಿಜೆಪಿ ಧುರೀಣ ಮತ್ತು ಮುಖ್ಯಮಂತ್ರಿ ಮನೋಹಲ್ ಲಾಲ್ ಖಟ್ಟರ್, ಕರ್ನಾಲ್ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್‍ನ ಪ್ರತಿಸ್ಪರ್ಧಿ ತಾರಲೋಚನ್ ಸಿಂಗ್ ಅವರನ್ನು 7,000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ. ಆದರೆ ಖಟ್ಟರ್ ಸಂಪುಟದ ಏಳು ಸಚಿವರು, ಬಿಜೆಪಿ ಅಧ್ಯಕ್ಷ ಸುಭಾಷ್ ಬರಲಾ ಮತ್ತು ವಿಧಾನಸಭಾಧ್ಯಕ್ಷ ಕನ್ವರ್ ಪಾಲ್ ಪರಾಭವಗೊಂಡಿರುವುದು ಮುಖ್ಯಮಂತ್ರಿಗೆ ಮುಖಭಂಗವಾಗಿದೆ. ಜನನಾಯಕ ಜನತಾಪಕ್ಷ (ಜೆಜೆಪಿ) ಅಧ್ಯಕ್ಷ ದುಷ್ಯಂತ್ ಚೌತಾಲಾ ಕಲಾನ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.

ಖ್ಯಾತ ಕುಸ್ತಿ ಪಟು ಬಬಿತಾ ಪೋಗಟ್ ದಾದ್ರಿ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ. ಆದರೆ ಟಿಕ್ ಟಾಕ್ ಸ್ಟಾರ್ ಮತ್ತುಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗಟ್ ಅವರಿಗೆ ಆದಾಂಪುರಂನಲ್ಲಿ ಸೋಲಾಗಿದೆ. ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಪುತ್ರ ಮತ್ತು ಕಾಂಗ್ರೆಸ್ ಯುವ ನಾಯಕ ಕುಲ್‍ದೀಫ್ ಬಿಷ್ಣೋಯ್ ಜಯ ಸಾಧಿಸಿದ್ದಾರೆ.

# ಮಹಾರಾಷ್ಟ್ರ: ಬಿಜೆಪಿ ವಿಜಯೋತ್ಸವ ಸಹಸ್ರಾರು ಲಾಡು ವಿತರಣೆ


ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗಲುವಿನ ವಿಶ್ವಾಸದೊಂದಿಗೆ ಬಿಜೆಪಿ ಕಾರ್ಯಕರ್ತರು ಪೂರ್ವಭಾವಿಯಾಗಿ ತಯಾರಿಸಿದ್ದ ಸಹಸ್ರಾರು ಲಾಡುಗಳನ್ನು ವಿಜಯೋತ್ಸವ ಸಂಭ್ರಮಾಚರಣೆಗಾಗಿ ವಿತರಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಪಕ್ಷದ ಜಯಭೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಫಲಿತಾಂಶ ಘೋಷಣೆಗೂ ಮೊದಲೇ ಐದು ಸಾವಿರಕ್ಕೂ ಹೆಚ್ಚು ಲಾಡುಗಳನ್ನು ಹಂಚಿದ್ದಾರೆ.

ಮುಂಬೈನ ವಿವಿಧ ಬಡಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಬೃಹತ್‍ಕಟೌಟ್, ಪೋಸ್ಟರ್‍ಗಳು ರಾರಾಜಿಸುವ ಬಣ್ಣಬಣ್ಣದ ಪೆಂಡಾಲ್‍ಗಳು ಕಂಡುಬರುತ್ತಿದ್ದು, ಈ ಪೆಂಡಾಲ್‍ಗಳಲ್ಲಿ ಬೃಹತ್ ಟಿವಿ ಪರದೆಗಳನ್ನು ಅಳವಡಿಸಿ ಫಲಿತಾಂಶದ ನೇರ ಪ್ರಸಾರ ಮಾಡಿದವು.

# ಕುತೂಹಲ ಮೂಡಿಸುತ್ತಿರುವ ಹರಿಯಾಣ ಫಲಿತಾಂಶ :
ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿರುವಂತೆಯೇ ಫಲಿತಾಂಶದ ಕುರಿತಾದ ಕುತೂಹಲ ಹೆಚ್ಚಾಗಿದೆ. ಆರಂಭಿಕ ಮುನ್ನಡೆ ಗಳಿಸಿದ್ದ ಬಿಜೆಪಿ ಹಿನ್ನಡೆ ಅನುಭವಿಸಿ, ನಂತರದಲ್ಲಿ ಮತ್ತೆ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೂಡ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು, ಇತರರ ನೆರವಿನೊಂದಿಗೆ ಸರ್ಕಾರ ರಚಿಸುವ ಪ್ರಯತ್ನದಲ್ಲಿದೆ.

90 ಕ್ಷೇತ್ರಗಳಿರುವ ಹರಿಯಾಣ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು 46 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ 44, ಕಾಂಗ್ರೆಸ್ 30, ಇತರರು 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹಲವು ಸುತ್ತು ಮತ ಎಣಿಕೆ ನಡೆಯಬೇಕಿದ್ದು, ಸಂಖ್ಯೆಗಳ ಲೆಕ್ಕಾಚಾರದಲ್ಲಿ ಬದಲಾವಣೆಯಾಗಲಿದೆ.

Facebook Comments

Sri Raghav

Admin