ಮಹಾರಾಷ್ಟ್ರದಲ್ಲಿ 48 ಗಂಟೆಯಲ್ಲಿ 10,೦೦೦ ಮಂದಿಗೆ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.28- ಡೆಡ್ಲಿ ಕೊರೊನಾ ವೈರಸ್ ದಾಳಿಯಿಂದ ಮಹಾರಾಷ್ಟ್ರ ಅಕ್ಷರಶಃ ತತ್ತರಗೊಂಡಿದೆ. ಸೋಂಕು ಮತ್ತು ಸಾವು ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.  ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 10,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ನಿನ್ನೆ ಒಂದೇ ದಿನ (24 ತಾಸುಗಳಲ್ಲಿ) ರಾಜ್ಯದಲ್ಲಿ 5,318 ಸೋಂಕು ಮತ್ತು 167 ಸಾವು ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದಲ್ಲಿ ಕಿಲ್ಲರ್ ವೈರಸ್‍ಗೆ ಈವರೆಗೆ ಸುಮಾರು 8,000 ಮಂದಿ ಬಲಿಯಾಗಿದ್ದು, 1,59,133 ರೋಗಿಗಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.  ದೇಶದ ವಾಣಿಜ್ಯ ರಾಜಧಾನಿ ಮುಂಬೈ ಅತಿ ಹೆಚ್ಚು ಸೋಂಕು ಮತ್ತು ಸಾವು ವರದಿಯಾಗಿರುವ ಮಹಾನಗರವಾಗಿದೆ.

ಇಲ್ಲಿನ ಅಂಧೇರಿ ಸಾಂಕ್ರಾಮಿಕ ರೋಗದ ಹಾಟ್‍ಸ್ಪಾಟ್ ಆಗಿದ್ದು, ಈವರೆಗೆ 10,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಏಷ್ಯಾದಲ್ಲೇ ಅತಿದೊಡ್ಡ ಕೊಳಗೇರಿ ಪ್ರದೇಶವಾಗಿರುವ ಧಾರಾವಿಯಲ್ಲಿ 4,688 ಜನರಿಗೆ ಸೋಂಕು ತಗುಲಿದ್ದು, ಅಲ್ಲಿ ಈವರೆಗೆ ಸಂಭವಿಸಿರುವ ಸಾವುಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.

ರಾಜ್ಯದಲ್ಲಿ ಅದರಲ್ಲಿಯೂ ಮುಂಬೈನಲ್ಲಿ ಸಾಂಕ್ರಾಮಿಕ ರೋಗ ಸಮುದಾಯ ಮಟ್ಟಕ್ಕೆ ಹಬ್ಬುತ್ತಿದೆಯೇ ಎಂಬ ಆತಂಕ ಸೃಷ್ಟಿಯಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

Facebook Comments