ಮಹಾರಾಷ್ಟ್ರ-ಹರಿಯಾಣ ಹೈವೋಲ್ಟೇಜ್ ಎಲೆಕ್ಷನ್ ನಾಳೆ ವೋಟಿಂಗ್, ಭಾರೀ ಬಂದೋಬಸ್ತ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಚಂಡಿಗಢ, ಅ.20-ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಹೈವೋಲ್ಟೇಜ್ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದೆ. ವ್ಯಾಪಕ ಬಂದೋಬಸ್ತ್ ನಡುವೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಎರಡು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ ಅಂತ್ಯಗೊಂಡಿದೆ. ಮತದಾರರನ್ನು ಓಲೈಸಲು ಪ್ರಮುಖ ರಾಜಕೀಯ ಪಕ್ಷಗಳ ಘಟನುಘಟಿಗಳು ಕೊನೆ ಕ್ಷಣದವರೆಗೂ ಬಿರುಸಿನ ಪ್ರಚಾರ ನಡೆಸಿದರು.

ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಇದೇ ವೇಳೆ 17 ರಾಜ್ಯಗಳ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಮತದಾನವಾಗಲಿದೆ. 288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 262 ಮಹಿಳಾ ಉಮೇದುವಾರರು.

ಬಹು ಜನ ಸಮಾಜ ಪಕ್ಷವು ಈ ಬಗ್ಗೆ ಗರಿಷ್ಠ 262 ಹುರಿಯಾಳುಗಳನ್ನು ಅಖಾಡಕ್ಕೀಳಿಸಿದೆ. ಅಲ್ಲದೇ 1,400 ಅಭ್ಯರ್ಥಿಗಳೂ ಸಹ ಸ್ಪರ್ಧೆಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ವಾರ್ಧಾಅತ್ಯಂತ ಪುಟ್ಟ ಮತ್ತು ಪನ್ವೆಲ್ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ.

288 ಸದಸ್ಯಬಲದ ಮಹಾರಾಷ್ಟ್ರದಲ್ಲಿ ಆಡಳಿತರೂಢ ಬಿಜೆಪಿ 150 ಕ್ಷೇತ್ರಗಳಲ್ಲಿ ಸ್ಫರ್ಧಿಸಿದ್ದರೆ, ಅದರ ಪ್ರಮುಖ ಮಿತ್ರಪಕ್ಷ ಶಿವಸೇನಾ 124 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ.

ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಮೈತ್ರಿಕೂಟ ಈ ಬಾರಿ ಬಿಜೆಪಿ-ಶಿವಸೇನಾ ವಿರುದ್ಧ ತೊಡೆತಟ್ಟಿ ನಿಂತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದಾದ್ಯಂತ ರ್ಯಾಲಿಗಳನ್ನು ನಡೆಸಿ ಭರ್ಜರಿ ಪ್ರಚಾರ ನಡೆಸಿದರು. ಕಾಂಗ್ರೆಸ್ ಮತ್ತು ಎನ್‍ಸಿಪಿ ಮುಖಂಡರೂ ಕೂಡ ಸಾರ್ವಜನಿಕ ಸಭೆಗಳ ಮೂಲಕ ಮತದಾರರನ್ನು ಓಲೈಸಲು ಯತ್ನಿಸಿದರು.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಚುನಾವಣೆ ನಡೆಯಲಿದ್ದು, ಒಟ್ಟು 1169 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇವರಲ್ಲಿ 104 ಮಹಿಳಾ ಸ್ಪರ್ಧಿಗಳೂ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ನಮೌಲ್ ಮತ್ತು ಬಾದಾಶಾಪುರ್ ಈ ರಾಜ್ಯದ ಅತಿ ಚಿಕ್ಕ ಮತ್ತು ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರಗಳಾಗಿವೆ.

ಮುಖ್ಯಮಂತ್ರಿ ಮನೋಹರ್ ಕಟ್ಟರ್ ಮತ್ತೊಂದು ಬಾರಿ ಅಧಿಕಾರ ಚುಕ್ಕಾಣಿ ಹಿಡಿಯುವ ಉಮೇದಿನಲ್ಲಿದ್ದಾರೆ. ಈ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆ ಬಿಹಾರದ ಸಮ್ಟಪುರ ಮತ್ತು ಮಹಾರಾಷ್ಟ್ರದ ಸತಾರ ಲೋಕಸಭೆ ಹಾಗೂ ವಿವಿಧ ರಾಜ್ಯಗಳ 51 ವಿಧಾನಸಭೆಗಳಿಗೆ ಉಪ ಚುನಾವಣೆ ನಡೆಯಲಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಅಗ್ರಮಾನ್ಯ ನಾಯಕರು ಬಿರುಸಿನ ಚುನಾವಣಾ ಪ್ರಚಾರ ಮಾಡಿದರು.

ಕಾಂಗ್ರೆಸ್ ಪರವಾಗಿ ರಾಹುಲ್‍ಗಾಂಧಿ, ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅ.24 ಗುರುವಾರ ಈ ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ.

ಭಾರೀ ಬಿಗಿ ಭದ್ರತೆ : ಚುನಾವಣೆ ಪ್ರಯುಕ್ತ ಎರಡೂ ರಾಜ್ಯಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

# ಎರಡೂ ರಾಜ್ಯಗಳಲ್ಲೂ ಬಿಜೆಪಿ ಜಯ : ಸಮೀಕ್ಷೆ
ಮಹರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಈಗಾಗಲೇ ಸಮೀಕ್ಷೆಗಳು ಹೇಳಿವೆ.

Facebook Comments

Sri Raghav

Admin