ಮಹಾರಾಷ್ಟ್ರದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ 16 ವಲಸೆ ಕಾರ್ಮಿಕರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಔರಂಗಾಬಾದ್(ಮಹಾರಾಷ್ಟ್ರ), ಮೇ 8-ದೇಶದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್ ಸಾವು ಮತ್ತು ಸೋಂಕಿನಿಂದ ತತ್ತರಿಸುತ್ತಿರುವ ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಘೋರ ದುರಂತವೊಂದು ಸಂಭವಿಸಿದೆ. ಹಳಿ ದಾಟುತ್ತಿದ್ದ ವಲಸೆ ಕಾರ್ಮಿಕರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡದು 16 ಮಂದಿ ಸಾವಿಗೀಡಾದ ದುರ್ಘಟನೆ ಔರಂಗಾಬಾದ್ ನಗರದಲ್ಲಿ ಸಂಭವಿಸಿದೆ.

ಈ ಭೀಕರ ದುರ್ಘಟನೆಯಲ್ಲಿ ಕೆಲವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಶೌತ್ ಸೆಂಟ್ರಲ್ ರೈಲ್ವೆಯ ನಂದೀಡ್ ವಲಯದ ಜಲ್ನಾ ಮತ್ತು ಔರಂಗಾಬಾದ್ ರೈಲ್ವೆ ನಿಲ್ದಾಣಗಳ ನಡುವಣ ಕರ್ಮಡ್ ರೈಲ್ವೆ ನಿಲ್ದಾಣದ ಬಳಿ ಈ ಘೋರ ದುರಂತ ಸಂಭವಿಸಿದೆ.

ಛತ್ತೀಸ್‍ಗಢದ ವಲಸೆ ಕಾರ್ಮಿಕರು ರೈಲು ಹಳಿ ದಾಟುತ್ತಿದ್ದಾಗ ಜಲ್ನಾದಿಂದ ಔರಂಗಾಬಾದ್‍ಗೆ ತೆರಳುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆಯಿತು. ಈ ದುರ್ಘಟನೆಯಲ್ಲಿ 16 ಕೂಲಿ ಕಾರ್ಮಿಕರು ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ. ಇಬ್ಬರು ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಉನ್ನತ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಾಳುಗಳನ್ನು ಔರಂಗಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.ಇನ್ನೊಂದು ಮೂಲಗಳ ಪ್ರಕಾರ ವಲಸೆ ಕಾರ್ಮಿಕರು ರೈಲ್ವೆ ಹಳಿ ಮೇಲೆ ಮಲಗಿದ್ದರು ಎಂದು ಹೇಳಲಾಗುತ್ತಿದೆ.

ಇವರು ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದತ್ತ ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಆಯಾಸದಿಂದಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದಾಗ ಗೂಡ್ಸ್ ರೈಲು ಅವರ ಮೇಲೆ ಹರಿಯಿತು ಎಂದು ಮೂಲಗಳು ತಿಳಿಸಿವೆ.

ಮೃತರೆಲ್ಲರೂ ಜಾಲ್ನಾದ ಉಕ್ಕು ಕಾರ್ಖಾನೆಯ ಕಾರ್ಮಿಕರಾಗಿದ್ದು, ಲಾಕ್‍ಡೌನ್‍ನಿಂದಾಗಿ ಘಟಕ ಮುಚ್ಚಲ್ಪಟ್ಟ ಕಾರಣ ಅವರು ನಿನ್ನೆ ರಾತ್ರಿ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದರು ಎಂದು ಹಿರಿಯ ಪೊಲೀಸ್ ಅಥಿಕಾರಿ ಸಂತೋಷ್ ಕೇತಮಲಾಸ್ ತಿಳಿಸಿದ್ಧಾರೆ. ಸ್ಥಳಕ್ಕೆ ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅನ್ಯ ರಾಜ್ಯಗಳ ಕಾರ್ಮಿಕರ ವಲಸೆ ಸಮಸ್ಯೆ ಮಹಾರಾಷ್ಟ್ರವನ್ನು ಕಾಡುತ್ತಿರುವ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ. ಕರ್ಮಡ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂದಿಡ್ಡಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

# ರಾಷ್ಟ್ರಪತಿ, ಪ್ರಧಾನಿ ಸಂತಾಪ :
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ರೈಲು ಡಿಕ್ಕಿಯಲ್ಲಿ ವಲಸೆ ಕಾರ್ಮಿಕರು ಮೃತಪಟ್ಟಿರುವುದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರದ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin