ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ : ಸಿಎಂ ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20-ಜಗತ್ತಿನ ಹತ್ತು ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಪರಿವರ್ತನೆಯ ಹರಿಕಾರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತೀಯರ ಜೀವನದಲ್ಲಿ ಹಾಸುಹೊಕ್ಕಿರುವ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಅವರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಪ್ರಶಂಸಿಸಿದರು.

ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಮಹರ್ಷಿಗಳು ಪ್ರತಿಯೊಬ್ಬ ಭಾರತೀಯರಲ್ಲಿ ಅಜರಾಮರವಾಗಿದ್ದಾರೆ. ಶ್ರೇಷ್ಠ ಸಾಹಿತ್ಯ ರಚಿಸುವ ಮೂಲಕ ಮನುಕುಲಕ್ಕೆ ಮಹಾನ್ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು. ಶ್ರೇಷ್ಠ ಸಾಹಿತ್ಯ ರಚನೆ ಮಾಡುವ ಮೂಲಕ ಪರಿವರ್ತನೆಗೆ ಮುನ್ನುಡಿ ಬರೆದವರು. ನಾವೆಲ್ಲರೂ ಅವರ ಆದರ್ಶಗಳು, ಚಿಂತನೆಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ, ನೆಮ್ಮದಿ ಸಹನೆಯಿಂದ ಬದುಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಾಲ್ಮೀಕಿ ಸಮುದಾಯವು ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ನಾಡನ್ನು ಕಟ್ಟುವ ಹಾಗೂ ನಾಡನ್ನು ಕಾಯುವ ಕೆಲಸದಲ್ಲಿ ಇವರು ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಹೊನಕೆ ಓಬವ್ವ, ಏಕಲವ್ಯ, ಸಿಂಧೂರು ಲಕ್ಷ್ಮಣ, ಸುರುಬೂರು ರಾಜರು, ಗಲಿಗಲಿ ಬೇಡರು ಸೇರಿದಂತೆ ಅನೇಕರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ವಾಲ್ಮೀಕಿ ಸಮುದಾಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು ಎಂದು ಕೊಂಡಾಡಿದರು.

ಈ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತದೆ. ವಾಲ್ಮಿಕಿ ಜಯಂತಿಗೆ ರಜೆ ನೀಡಿ ಸರ್ಕಾರದ ವತಿಯಿಂದಲೇ ಆಚರಣೆ ಮಾಡುತ್ತಿದ್ದೇವೆ. ಸರ್ಕಾರ ಹಂತ ಹಂತವಾಗಿ ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.

Facebook Comments