ಹಾಸನಾಂಭೆ ದರ್ಶನ : ಭಕ್ತಾಧಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ ನಾನಾ ಸೌಕರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಅ.15-ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತಾದಿಗಳು ಮಳೆಯಲ್ಲಿ ನೆನೆಯದಂತೆ ಸರದಿ ಸಾಲುಗಳಿಗೆ ವಾಟರ್ ಫ್ರೂಫ್ ಮೇಲ್ಛಾವಣಿಯನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಹಾಸನಾಂಬ ಜಾತ್ರಾ ಮಹೋತ್ಸವ ಸಿದ್ಧತಾ ಕಾರ್ಯಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸರದಿ ಸಾಲಿನಲ್ಲಿ ಸಾಗುವಾಗ ಭಕ್ತಾದಿಗಳು ನಿರಾಯಾಸದಿಂದ ಸಾಗಲು ಸಹಕಾರಿಯಾಗುವಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ದೇವಸ್ಥಾನದ ಸುತ್ತ ಬ್ಯಾರಿಕೇಡ್ ವ್ಯವಸ್ಥೆ ಸೇರಿದಂತೆ ಇತರೆ ಕೆಲಸಗಳನ್ನು ಶೀಘ್ರವೇ ಮುಗಿಸುವಂತೆ ಸೂಚನೆ ನೀಡಿದರು.

ದೇವಸ್ಥಾನಕ್ಕೆ ತೆರಳುವ ನಗರದ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಗಣ್ಯರಿಗೆ ಆಹ್ವಾನ ಪತ್ರಿಕೆಗಳನ್ನು ತಪ್ಪದೆ ತಲುಪಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಾತ್ರಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಇಲ್ಲದಿದ್ದಲ್ಲಿ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಆರ್ ಗಿರೀಶ್ ಹೇಳಿದರು.

ಮಳೆಯ ಕಾರಣದಿಂದ ವಿದ್ಯುತ್ ವ್ಯತ್ಯಯವಾಗುವ ಸಂಭವವಿದ್ದು, ಪರ್ಯಾಯವಾಗಿ ದೇವಸ್ಥಾನದ ಆವರಣದಲ್ಲಿ ಚಾರ್ಜ್‍ಡ್ ಲೈಟ್ ಅಥವಾ ಸೋಲಾರ್ ಲೈಟ್‍ಗಳನ್ನು ಅಳವಡಿಸುವಂತೆ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ಮತ್ತು ಹಾಸನಾಂಬ ದೇವಸ್ಥಾನದ ಆಡಳಿತಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್ ಡಿವೈಎಸ್‍ಪಿ ಪುಟ್ಟಸ್ವಾಮಿ ಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‍ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ, ಮುಜರಾಯಿ ತಹಶೀಲ್ದಾರ್ ಶಾರದಾಂಬ, ತಹಶೀಲ್ದಾರ್ ಮೇಘನ ಸಭೆಯಲ್ಲಿ ಹಾಜರಿದ್ದರು.

# ಶ್ರೀಹಾಸನಾಂಬ ವೆಬ್‍ಸೈಟ್‍ಗೆ ಚಾಲನೆ:
ಹಾಸನ,ಅ.15- ಹಾಸನಾಂಬ ದೇವಿಯ ಜಾತ್ರೋತ್ಸವದ ಸಲುವಾಗಿ ಭಕ್ತಾಧಿಗಳಿಗೆ ಜಿಲ್ಲೆಯ ಕುರಿತ ವಿಶೇಷ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಶ್ರೀ ಹಾಸನಾಂಬ ಡಾಟ್ ಕಾಮ್ (srihasanamba.com) ವೆಬ್‍ಸೈಟ್ ಆರಂಭಿಸಿದ್ದು ಜಿಲ್ಲಾಧಿಕಾರಿ ಆರ್.ಗಿರೀಶ್ ವೆಬ್‍ಸೈಟ್‍ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅವರು, ವೆಬ್‍ಸೈಟ್‍ನಲ್ಲಿ ಮಾಹಿತಿಯು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿದ್ದು, ಅದರಲ್ಲಿ ಜಿಲ್ಲೆಯಲ್ಲಿನ ಕುದುರೆ ಗುಂಡಿ ಶಾಸನ, ದೇವಾಲಯದ ಇತಿಹಾಸ, ಹಾಸನಾಂಬ ದೇವಿ ದರ್ಶನದ ಟಿಕೇಟ್ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ ಹಾಗೂ ಹಾಸನ ಜಿಲ್ಲೆಯ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ದೇವಸ್ಥಾನ ಬಾಗಿಲು ತೆರೆಯುವ ಅ.17 ರಂದು ಮಧ್ಯಾಹ್ನ 1 ರಿಂದ 2 ರ ವರೆಗೆ ಹಾಸನ ನಗರದ ನಿಗದಿತ ಮಾರ್ಗಗಳಲ್ಲಿ ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ಮೆರವಣಿಗೆಯು ಹಾಸನಾಂಬ ದೇವಸ್ಥಾನದಿಂದ ಆರಂಭವಾಗಿ ಕಲಾಭವನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ಮತ್ತು ಹಾಸನಾಂಬ ದೇವಸ್ಥಾನದ ಆಡಳಿತಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್, ಮುಜರಾಯಿ ತಹಶೀಲ್ದಾರ್ ಶಾರದಾಂಬ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸವಿತಾ ಹಾಜರಿದ್ದರು.

# ಹಾಸನಾಂಬ ದೇವಿಯ ಒಡವೆ ಹಸ್ತಾಂತರ: 
ಹಾಸನ,ಅ.15- ಹಾಸನಾಂಬ ದೇವಿಯ ಜಾತ್ರೋತ್ಸವದ ಸಲುವಾಗಿ ಹಾಸನಾಂಬ ದೇವಿಯ ಒಡವೆಗಳನ್ನು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಆರ್.ಗಿರೀಶ್‍ರವರು ದೇವಸ್ಥಾನದ ಅರ್ಚಕರಿಗೆ ಹಸ್ತಾಂತರ ಮಾಡಿದರು.  ಹಾಸನಾಂಬ ದೇವಿಯ ಒಡವೆಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಪೂಜೆ ನೆರವೇರಿಸಿದ ನಂತರ ಜಿಲ್ಲಾ ನ್ಯಾಯಾಲಯದ ಆವರಣದ ಮೂಲಕ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಒಡವೆಗಳನ್ನು ತೆಗೆದುಕೊಂಡು ಹೋಗಲಾಯಿತು.

ಪ್ರಭಾರ ಅಪರ ಜಿಲ್ಲಾಧಿಕಾರಿ ಮತ್ತು ಹಾಸನಾಂಬ ದೇವಸ್ಥಾನದ ಆಡಳಿತಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್, ತಹಶೀಲ್ದಾರ್ ಮೇಘನಾ, ಮುಜರಾಯಿ ತಹಶೀಲ್ದಾರ್ ಶಾರದಾಂಬ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Facebook Comments