ಗಾಂಧೀಜಿ ತತ್ತ್ವಾದರ್ಶಗಳು ನಮಗೆ ಸ್ಫೂರ್ತಿ : ರಾಷ್ಟ್ರಪತಿ, ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.2- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಗಾಂಧೀಜಿ ಜಯಂತಿ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗಾಂಧೀಜಿಯವರನ್ನು ಸ್ಮರಿಸಿದ್ದಾರೆ.

ಗಾಂಧೀಜಿಯವರ 150ನೇ ಜಯಂತಿಯ ಈ ಸಮಯ ನಮಗೆ ಸತ್ಯ. ಅಹಿಂಸೆ, ಸಹಕಾರ, ನೈತಿಕತೆ ಮತ್ತು ಸರಳತೆಯ ಮೌಲ್ಯಗಳನ್ನು ನೆನಪಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಸಂದರ್ಭವಾಗಿದೆ. ಅವರ ಸಂದೇಶಗಳು ನಮಗೆ ಪ್ರಸ್ತುತವಾಗಿದ್ದು ಅವರ ಮಾರ್ಗದರ್ಶನಗಳು ಎಂದೆಂದಿಗೂ ದಾರಿದೀಪ ಎಂದಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಹಾತ್ಮಾ ಗಾಂಧಿಯವರ ದೃಷ್ಟಿಕೋನವನ್ನು ಭಾರತ ನಿರಂತರವಾಗಿ ಸ್ಫೂರ್ತಿ ಪಡೆಯುತ್ತಿರುತ್ತದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿರುವುದು ಅತ್ಯಂತ ಯಶಸ್ವಿಯಾಗುತ್ತಿರುವುದು ಗಾಂಧೀಜಿಯವರೇ ಇದಕ್ಕೆ ಪ್ರೇರಣೆ. ಗಾಂಧೀಜಿಯವರ ಸ್ವಾತಂತ್ರ್ಯತೆ, ವ್ಯಕ್ತಿತ್ವ, ಸಮಾನತೆಯಿಂದ ಕಾಣುವ ದೃಷ್ಟಿ ಯಾವುದೇ ಸ್ಥಳ ಮತ್ತು ಸಮಯಕ್ಕೆ ಸೀಮಿತವಾಗಿರದೆ ಸಮಯಾತೀತವಾಗಿ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದರು.

ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಪ್ರೀತಿಯ ಬಾಪುಗೆ ನಮನಗಳು. ಮಾನವೀಯತೆಗೆ ಗಾಂಧೀಜಿಯವರು ನೀಡಿದ ಅಮೂಲ್ಯ ಕೊಡುಗೆಗಳಿಗೆ ನಮ್ಮ ಕೃತಜ್ಞತೆಗಳು. ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಅದರ ಕಡೆಗೆ ಕೆಲಸ ಮಾಡೋಣ ಎಂದಿದ್ದಾರೆ. ಬೆಳಗ್ಗೆ ದೆಹಲಿಯ ರಾಜಘಾಟ್‍ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿದ ಮೋದಿ ಬಾಪೂಜಿಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಭಾರತೀಯ ಜನತಾ ಪಾರ್ಟಿಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಉಪಸ್ಥಿತರಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ ಮನಮೋಹನ್‍ಸಿಂಗ್ ಸಹ ಗಾಂಧೀಜಿ ಸಮಾಧಿಗೆ ಪುಷ್ಪ ಗೌರವ ಸಲ್ಲಿಸಿದರು. ಇಂದು ದೇಶಾದ್ಯಂತ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷ 3 ತಿಂಗಳ ಕಾಲ ಗಾಂಧಿ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ.

ಈ ಸಂಬಂಧ ಬಿಜೆಪಿ ನಾಯಕರಿಗೆ ಸುತ್ತೋಲೆ ಹೊರಡಿಸಲಾಗಿದ್ದು ಮುಂದಿನ ವರ್ಷ ಜನವರಿ 31ಕ್ಕೆ ಮುಕ್ತಾಯವಾಗಲಿದೆ. ಈ ಸಂಕಲ್ಪ ಯಾತ್ರೆಯಡಿ ಬಿಜೆಪಿ, ಗಾಂಧೀಜಿಯವರ ತತ್ವ, ಆದರ್ಶಗಳು, ಅಹಿಂಸೆ, ಸ್ವರಾಜ, ಸರಳತೆಯನ್ನು ಪ್ರಚುರಪಡಿಸಲಿದೆ. ಯಾತ್ರೆ ಸಂದರ್ಭದಲ್ಲಿ ಫೋಸ್ಟರ್, ಬ್ಯಾನರ್‍ಗಳು ಮತ್ತು ಕಿಟ ಗಳನ್ನು ಬಿಜೆಪಿಯ ರಾಜ್ಯಕೇಂದ್ರಗಳಲ್ಲಿ ಬಿತ್ತರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನಲ್ಲಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾರೆ. ಆಯಾ ರಾಜ್ಯಗಳಲ್ಲಿ ಬಿಜೆಪಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ಲಭಿಸಿದೆ. ಪ್ರಧಾನಿ ಮೋದಿ ಇಂದು ಸಂಜೆ ಅಹಮದಾಬಾದ್‍ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಗಾಂಧೀ ಮತ್ತು ಕಸ್ತೂರಿ ಬಾ ಅವರ ಕೊಡುಗೆಯನ್ನು ಸ್ಮರಿಸುವರು.

Facebook Comments