“ನನ್ನ ಹೇಳಿಕೆಗೆ ಈಗಲೂ ಬದ್ಧ” : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.17- ನಾನು ಪಲಾಯನವಾದಿನೋ… ವಿಶ್ವನಾಥ್ ಪಲಾಯನವಾದಿಯೋ ಎಂಬುದು ನಾಡಿನ ಜನತೆಗೆ ತಿಳಿಯಿತು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಇಂದು ಬೆಳಗ್ಗೆ ವಿಶ್ವನಾಥ್ ಅವರ ಆಹ್ವಾನ ಸ್ವೀಕರಿಸಿದ್ದ ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ಬಂದು ದೇವಾಲಯದಲ್ಲೇ ಇದ್ದ ಅವರು ಗೋಪುರದ ಬಳಿ ಕಾದು ನಿಂತಿದ್ದ ವಿಶ್ವನಾಥ್ ಅವರು ತೆರಳಿದ ಬಳಿಕ ದೇಗುಲದಿಂದ ಹೊರಬಂದು ಈ ರೀತಿ ಪ್ರತಿಕ್ರಿಯಿಸಿದರು.

ನಾನು ದೇವಿ ಮುಂದೆ ಅವರು (ವಿಶ್ವನಾಥ್) ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಪ್ರಮಾಣ ಮಾಡಿದ್ದೇನೆ. ಅವರು ದೇವಾಲಯದೊಳಗೆ ಬಂದು ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣೀಕರಿಸಬೇಕಿತ್ತು. ಆದರೆ, ವಿಶ್ವನಾಥ್ ದೇವಾಲಯದ ಒಳಗೆ ಬಾರದೆ ಹೊರಗೇ ನಿಂತಿದ್ದರು.  ಈಗ ದೇವಾಲಯದಿಂದ ನಾನು ಹೊರಗೆ ಬರುತ್ತಿದ್ದಂತೆ ಅವರು ತೆರಳಿದ್ದಾರೆ. ನಾನು ಪಲಾಯನವಾದಿಯೋ… ಅವರೋ… ಎಂಬುದು ಜನರಿಗೇ ತಿಳಿಯುತ್ತದೆ ಎಂದರು.

ನಾನು ಇನ್ನು ಮುಂದೆ ಯಾವುದೇ ರೀತಿಯ ಆರೋಪ-ಪ್ರತ್ಯಾರೋಪ ಮಾಡುವುದಿಲ್ಲ. ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ, ನಾನು ಮಾಡಿದ ಆರೋಪದ ಬಗ್ಗೆ ಆಣೆ ಮಾಡಲು ಅವರು ಬೆಟ್ಟಕ್ಕೆ ಬಂದರೂ ಸಹ ಪ್ರಮಾಣ ಮಾಡದೆ ಹೋಗಿದ್ದಾರೆ. ಇದರಿಂದ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಮತ್ತೆ ಈ ಬಗ್ಗೆ ನಾನು ಮಾತನಾಡುವುದಿಲ್ಲ.

ನಾನು ಮಾಡಿದ ಆರೋಪಗಳೆಲ್ಲ ಸತ್ಯ ಎಂದರು. ಇದೇ ಸಂದರ್ಭದಲ್ಲಿ ಸಾ.ರಾ.ಮಹೇಶ್ ಬೆಂಬಲಿಗರು ವಿಶ್ವನಾಥ್ ವಿರುದ್ಧ ಹಾಗೂ ಸಾ.ರಾ.ಮಹೇಶ್ ಪರವಾಗಿ ಘೋಷಣೆ ಕೂಗಿದರು. ಸಾ.ರಾ.ಮಹೇಶ್ ಪರವಾಗಿ ದೇವಿಗೆ 101 ಈಡುಗಾಯಿಗಳನ್ನು ಒಡೆದರು. ಇಂದು ಮುಂಜಾಗ್ರತಾ ಕ್ರಮವಾಗಿ ಬೆಟ್ಟಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾ.ರಾ.ಮಹೇಶ್ ಮತ್ತು ವಿಶ್ವನಾಥ್ ನಡುವಿನ ಜಿದ್ದಾಜಿದ್ದಿನಲ್ಲಿ ಬೆಟ್ಟಕ್ಕೆ ಬಂದ ಸಾರ್ವಜನಿಕರು ಪರದಾಡುವಂತಾಯಿತು.

ಕಮಾಂಡೋ ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿ ಹತೋಟಿಗೆ ನಿಯೋಜನೆಗೊಂಡು ಎಲ್ಲೆಡೆ ಬಂದೋಬಸ್ತ್ ಮಾಡಿದ್ದರು. ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲ ವಾಹನಗಳನ್ನೂ ತಡೆದು ಪರಿಶೀಲಿಸಿ ಸಾ.ರಾ.ಮಹೇಶ್ ಹಾಗೂ ವಿಶ್ವನಾಥ್ ಬೆಂಬಲಿಗರನ್ನು ಬೆಟ್ಟಕ್ಕೆ ಬಿಡದೆ ಪ್ರವಾಸಿಗರನ್ನು ಮಾತ್ರ ಬಿಡುತ್ತಿದ್ದರು.

Facebook Comments