‘ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ’ ” ಸಿಎಂಗೆ ಹಳೆ ಮಾತು ನೆನಪಿಸಿದ ಕುಮಟಹಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿಗೆ ಎಂದಿಗೂ ತಪ್ಪಿದವರಲ್ಲ ಎನ್ನುವ ಮೂಲಕ ನನಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಎಸ್‍ವೈ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ಎಂದೂ ಕೂಡ ಕೊಟ್ಟ ಮಾತಿನಿಂದ ಹಿಂದೆ ಸರಿದವರಲ್ಲ. ಇದನ್ನು ಅವರ ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಾಣ ಬಿಟ್ಟರೂ ಯಡಿಯೂರಪ್ಪ ಕೊಟ್ಟ ಮಾತಿನಿಂದ ಹಿಂದೆ ಸರಿಯುವವರಲ್ಲ.ಶ್ರೀಮಂತ್ ಪಾಟೀಲ್ ಮತ್ತು ನನ್ನನ್ನು ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು 35 ಸಾವಿರ ಜನರ ಮುಂದೆ ವಾಗ್ದಾನ ಮಾಡಿದ್ದರು. ಈಗ ಕೊಟ್ಟ ಮಾತಿನಿಂದ ಹೇಗೆ ಹಿಂದೆ ಸರಿಯುತ್ತಾರೆ ಎಂದು ಪ್ರಶ್ನಿಸಿದರು.  ನನ್ನನ್ನು ಮಂತ್ರಿ ಸ್ಥಾನದಿಂದ ಕೈ ಬಿಡುತ್ತಾರೆಂಬ ಆತಂಕವಿಲ್ಲ. ನೂರಕ್ಕೆ ನೂರರಷ್ಟು ನನಗೆ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಆಗುತ್ತದೆ ಎಂದು ಕುಮಟಳ್ಳಿ ಎಚ್ಚರಿಕೆ ನೀಡಿದರು.

ಸಚಿವ ಆಕಾಂಕ್ಷಿ ಪಟ್ಟಿಯಲ್ಲಿ ನಾನು ಇದ್ದೇನೋ ಇಲ್ಲವೋ ಎಂದು ಹೇಳುವುದು ಸಣ್ಣತನವಾಗುತ್ತದೆ. ನನ್ನನ್ನು ಮಂತ್ರಿ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಯಡಿಯೂರಪ್ಪನವರೇ ಸ್ವಯಂಪ್ರೇರಿತರಾಗಿ ಹೇಳಿರುವಾಗ ಅದರ ಬಗ್ಗೆ ನಾನು ಯೋಚಿಸುವುದು ಸರಿಯಲ್ಲ. ಅಥಣಿಯಿಂದ ನನ್ನನ್ನು , ಕಾಗವಾಡದಿಂದ ಶ್ರೀಮಂತ್ ಪಾಟೀಲ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುವಾಗ ಸಂಶಯದ ಮಾತೇಕೆ ಎಂದು ಪ್ರಶ್ನಿಸಿದರು.

ಒಂದೂವರೆ ವರ್ಷದಿಂದ ನಾವು ಹುಲಿ ಬಾಯಿಗೆ ತಲೆಕೊಟ್ಟಂತಹ ಪರಿಸ್ಥಿತಿ ಇತ್ತು. ಇದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಉಪಚುನಾವಣೆಯಲ್ಲಿ ನಮ್ಮನ್ನು ಮತದಾರರು ಭಾರೀ ಅಂತರಗಳಿಂದ ಆಯ್ಕೆ ಮಾಡಿದ್ದಾರೆ.  ನಮಗೆ ಯಾವುದೇ ರೀತಿಯ ಆತಂಕವಿಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

Facebook Comments