‘ಆಪರೇಷನ್ ಕಮಲದಲ್ಲಿ ನಾನೇ ರನ್ನರ್ ಅಪ್’ : ಮಹೇಶ್‍ ಕುಮಟಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಮಹೇಶ್‍ಕುಮಟಳ್ಳಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಯಾವತ್ತೂ ಕೊಟ್ಟ ಮಾತನ್ನು ತಪ್ಪಿಲ್ಲ. ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರ ಪೈಕಿ ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದರೆ ಬೇಸರವಾಗುತ್ತದೆ.

ಕಳೆದ ಒಂದೂವರೆ ವರ್ಷದಿಂದಲೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರೇ ಮುಂಚೂಣಿಯಲ್ಲಿತ್ತು. ಅವರನ್ನು ಬಿಟ್ಟರೆ ನನ್ನ ಹೆಸರೇ ಕೇಳಿ ಬರುತ್ತಿತ್ತು. ಹೀಗಾಗಿ ನಾನೇ ರನ್ನರ್ ಅಪ್. ಆದರೂ ಸಚಿವ ಸ್ಥಾನ ಇಲ್ಲ ಎಂಬ ವದಂತಿ ಇದೆ ಎಂದರು. ನನಗೆ ಸಚಿವ ಸ್ಥಾನ ನೀಡಲಾಗದಿದ್ದರೆ ಮಾಜಿ ಸಚಿವರಾದ ಎಚ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು.

ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಯೋಗೇಶ್ವರ್ ನಮ್ಮೆಲ್ಲರ ಜತೆಯಲ್ಲಿದ್ದು ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದೆ ಇಟ್ಟಿದ್ದೇನೆ ಎಂದು ತಿಳಿಸಿದರು. ಮುಖ್ಯಮಂತ್ರಿ ಹಾಗೂ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದು, ಒಂದು ವೇಳೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದರೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನಗೆ ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ. ವಿಶ್ವನಾಥ್ ಹಾಗೂ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡಬೇಕು ಎಂದರು.

ರಮೇಶ್‍ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹ. ಜಲಸಂಪನ್ಮೂಲ ಖಾತೆಯನ್ನು ಅವರಿಗೆ ನೀಡಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ಅಪೇಕ್ಷೆ. ತಮ್ಮ ಕ್ಷೇತ್ರದ ಕೆಲಸದ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದನೇ ಹೊರತು ಸಚಿವ ಸ್ಥಾನಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments