ಸಾಯೋತನಕ ಬಿಜೆಪಿಯಲ್ಲೇ ಇರುವೆ, ಬಂಡಾಯದ ಸಹವಾಸವೇ ಬೇಡ : ಮಹೇಶ್ ಕುಮಟಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಅಥಣಿ, ಫೆ.11- ಸಾಯೋತನಕ ಬಿಜೆಪಿಯಲ್ಲೇ ಇರುವೆ. ಇನ್ನೊಮ್ಮೆ ಹುಟ್ಟಿದರೂ ಸತ್ತರೂ ಬಂಡಾಯದ ಸಹವಾಸವೇ ಬೇಡ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 30 ವರ್ಷ ಕಾಂಗ್ರೆಸ್‍ನಲ್ಲಿದ್ದೆ. ಇನ್ನು ಮುಂದೆ 30 ವರ್ಷ ಬಿಜೆಪಿಯಲ್ಲಿರುವೆ. ಇನ್ನೊಮ್ಮೆ ಹುಟ್ಟಿದರೂ ಸತ್ತರೂ ಬಂಡಾಯ ಬೇಡವೇ ಬೇಡ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಮಂತ್ರಿಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವಿಲ್ಲ. ಮುಂದಿನ ದಿನಗಳಲ್ಲಿ ಯೋಗ್ಯ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸವಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‍ನ 17 ಶಾಸಕರು ರಾಜೀನಾಮೆ ನೀಡಿದ ಕಾರಣದಿಂದ ಕೋರ್ಟು, ಕಚೇರಿ ಹೋರಾಟದ ನಂತರ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಯಾವುದೇ ಕಾರಣಕ್ಕೂ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಮೂಲ ಬಿಜೆಪಿ ಹಾಗೂ ನಮ್ಮ ನಡುವೆ ಯಾವುದೇ ಅಸಮಾಧಾನವಿಲ್ಲ. ನಾವು ಬಿಜೆಪಿಗೆ ಪ್ರವೇಶಿಸಿದ ಮೇಲೆ ಬಿಜೆಪಿಯವರೇ ಆಗಿದ್ದೇವೆ ಎಂದು ಕುಮಟಳ್ಳಿ ಹೇಳಿದರು. ಬಂಡಾಯ ಏಳುವುದು ಅಷ್ಟು ಸುಲಭದ ಕಾರ್ಯವಲ್ಲ. ಈ ಹಿಂದೆ ನಾನು ಒಮ್ಮೆ ರಮೇಶ್ ಜಾರಕಿಹೊಳಿ ಅವರಿಗೆ ಇನ್ನೊಮ್ಮೆ ಹುಟ್ಟಿ ಸತ್ತರೂ ಬಂಡಾಯ ಬೇಡ ಎಂಬ ಮಾತನ್ನು ಹೇಳಿದ್ದೆ ಎಂದು ಕಳೆದುಹೋದ ಘಟನೆಯನ್ನು ಸ್ಮರಿಸಿದರು.

Facebook Comments