ದೆಹಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.26- ದೆಹಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, 15 ಜಿಲ್ಲೆಗಳ ಪೈಕಿ 11ಕ್ಕೆ ಮಹಿಳಾ ಡಿಸಿಪಿಗಳನ್ನು ನಿಯೋಜಿಸಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ದೆಹಲಿ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನ ಅವರ ಶಿಫಾರಸ್ಸು ಆಧರಿಸಿ ನಡೆದಿರುವ ವರ್ಗಾವಣೆ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಸಹಿ ಹಾಕಿದ್ದಾರೆ. ದೆಹಲಿ, ಅಂಡಮಾನ್, ನಿಕೋಬಾರ್‍ ದ್ವೀಪ, ಲಕ್ಷದೀಪ, ನಗರ್‍ಹವೇಲಿ ಮತ್ತು ಡಾಮನ್ ಮತ್ತು ಡಯು ಪೊಲೀಸ್ ಸೇವೆಯಲ್ಲಿದ್ದ 10 ಮಂದಿ ಅಧಿಕಾರಿಗಳನ್ನು ಸ್ಥಾನಪಲ್ಲಟ ಮಾಡಲಾಗಿದೆ. ದೆಹಲಿ ಡಿಸಿಪಿಗಳಾಗಿ ನಿಯೋಜಿತರಾದ ಅಧಿಕಾರಿಗಳ ಪೈಕಿ ಬಹುತೇಕರು 2010ನೇ ಸಾಲಿನ ಐಪಿಎಸ್ ಅಧಿಕಾರಿಗಳಾಗಿದ್ದು, ಯುವ ಉತ್ಸಾಹಿಗಳಾಗಿದ್ದಾರೆ.

ಏಳನೇ ಬೆಟಾಲಿಯನ್‍ನಲ್ಲಿ ಕಮಾಂಡೆಂಟ್ ಆಗಿದ್ದ ಬೆನಿಟ ಮೆರಿ ಜೈಕೇರ್‍ರನ್ನು ದಕ್ಷಿಣ ಜಿಲ್ಲೆಯ ಡಿಸಿಪಿಯನ್ನಾಗಿ ನೇಮಿಸಲಾಗಿದೆ. ಸ್ವೇತ ಚಹ್ವಾಣ್‍ರನ್ನು ಕೇಂದ್ರ ಡಿಸಿಪಿಯನ್ನಾಗಿ, ಇಷಾ ಪಾಂಡೆ ಅವರನ್ನು ಆಗ್ನೇಯ ಡಿಸಿಪಿಯನ್ನಾಗಿ ನಿಯೋಜಿಸಲಾಗಿದೆ.

ಈ ಮೊದಲೇ ಉಷಾ ರಂಗಣಿ ಅವರನ್ನು ವಾಯುವ್ಯ, ಪ್ರಿಯಾಂಕ್ ಕಶ್ಯಪ್‍ರನ್ನು ಪೂರ್ವ ವಿಭಾಗಕ್ಕೆ, ಊರ್ವಿಜಾ ಗೋಯೆಲ್‍ರನ್ನು ಪಶ್ಚಿಮ ಜಿಲ್ಲೆ ಡಿಸಿಪಿಗಳನ್ನಾಗಿ ನೇಮಿಸಲಾಗಿತ್ತು. ಜಮ್ಸಿತ್ ಸಿಂಗ್, ಇಂಗಿತ್ ಪ್ರತಾಪ್ ಸೇರಿದಂತೆ ಅನೇಕರನ್ನು ಆಯಾ ಕಟ್ಟಿನ ಜಾಗಗಳಿಗೆ ನೇಮಿಸಲಾಗಿದೆ.

Facebook Comments