ಭಾರತದ ಸಾಧನೆಗೆ ವಿಶ್ವಸಂಸ್ಥೆ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.1-ಸಾಂಕ್ರಾಮಿಕ ಮಲೇರಿಯಾ ರೋಗ ತಡೆಗಟ್ಟುವಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದಲ್ಲಿ ಕಳೆದ 2000ನೆ ಇಸವಿಯಲ್ಲಿ 20 ಮಿಲಿಯನ್ ಇದ್ದ ಮಲೇರಿಯಾ ಇದೀಗ 5.6 ಮಿಲಿಯನ್‍ಗೆ ಕುಸಿದಿದೆ. ಈ ಪ್ರಗತಿಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದು ವಿಶ್ವಸಂಸ್ಥೆಯ 2020ರ ವರದಿಯಲ್ಲಿ ಬಣ್ಣಿಸಲಾಗಿದೆ.

ವಿಶ್ವದ್ಯಾಂತ 229 ಮಿಲಿಯನ್ ಇದ್ದ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಕುಸಿತ ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚಾಗಿದ್ದ ಮಲೇರಿಯಾ ಸಾವು ಪ್ರಕರಣಗಳು ಕಡಿಮೆಯಾಗಿವೆ. ಈ ಪ್ರಗತಿಗೆ ಭಾರತದ ಕೊಡುಗೆ ಆಪಾರ ಎಂದು ತಿಳಿಸಲಾಗಿದೆ.

ವಿಶ್ವ ಮಲೇರಿಯಾ ಪ್ರಕರಣಗಳಲ್ಲಿ ಆಗ್ನೇಯ ಏಷ್ಯಾದಲ್ಲೇ ಶೇ.3ರಷ್ಟಿತ್ತು. ಇದೀಗ ಆ ರಾಷ್ಟ್ರಗಳಲ್ಲಿ ಮಲೇರಿಯಾ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಮಲೇರಿಯಾ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಭಾರತ, ನೈಜೀರಿಯಾ, ತಾಂಜೇನಿಯಾ ಮತ್ತಿತರ ರಾಷ್ಟ್ರಗಳಲ್ಲೂ ಮಲೇರಿಯಾ ವಿರುದ್ಧದ ಹೋರಾಟ ತೀವ್ರಗೊಂಡಿದ್ದು ಭವಿಷ್ಯದಲ್ಲಿ ಮಾರಣಾಂತಿಕ ಮಲೇರಿಯಾ ಹೊಡೆದೊಡಿಸಲು ವಿಶ್ವ ಸಮುದಾಯ ಕೈ ಜೋಡಿಸಬೇಕು ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Facebook Comments