ಮಲಯಾಳಂನ ಖ್ಯಾತ ನಟ ರಿಜಭಾವ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ, ಸೆ. 14- ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ಖಳನಟ ರಿಜಭಾವ (59) ಚಿಕಿತ್ಸೆ ಫಲಿಸದೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಲಯಾಳಂ ಚಿತ್ರರಂಗದ ಶ್ರೇಷ್ಠ ನಟರುಗಳಾದ ಮೋಹನ್‍ಲಾಲ್ ಹಾಗೂ ಮಮ್ಮುಟಿಯ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ರಿಜಭಾವ ಡಬ್ಬಿಂಗ್ ಕಲಾವಿದರಾಗಿದ್ದರಲ್ಲದೆ, ಕಿರುತೆರೆಯಲ್ಲೂ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು.

ರಂಗಭೂಮಿ ಕಲಾವಿದರಾದ ರಿಜಭಾವ ಅವರು 1987ರಲ್ಲಿ ನಾಯಕನಟನಾಗಿ ಅಭಿನಯಿಸಿದ್ದ ವಿಷ್ಣುಪಾಕ್ಷಿ ಬಿಡುಗಡೆಯಾಗದಿದ್ದರೂ 1990ರಲ್ಲಿ ತೆರೆಕಂಡ ಡಾ.ಪಶುಪತಿ ಚಿತ್ರದ ಮೂಲಕ ನಾಯಕನಟರಾದರು. ನಂತರ ಖಳನಟ, ಪೋಷಕನಟರಾಗಿ ಗುರುತಿಸಿಕೊಂಡ ಅವರು ಇನ್ ಹರಿಹರ ನಗರ, ಮಲ್ಲಪುರಂ ಹಾಜಿ, ಮಹನಾಯ ಜೋಜಿ, ಪೋಕಿರಿರಾಜ, ಅಸುರವಂಶಂ , ಡ್ಯೂಪ್ಲಿಕೇಟ್, ಇತ್ತೀಚೆಗೆ ಬಿಡುಗಡೆ ಆದ ಮಮ್ಮುಟಿ ನಟನೆಯ ಒನ್ ಸಿನಿಮಾದಲ್ಲಿ ನಟಿಸಿದ್ದರು ರಿಜಭಾವ ಇದುವರೆಗೂ 139 ಚಿತ್ರಗಳಲ್ಲಿ ನಟಿಸಿದ್ದಾರೆ.

2010ರಲ್ಲಿ ತೆರೆಕಂಡ ಕರ್ಮಯೋಗಿ ಚಿತ್ರದ ಡಬ್ಬಿಂಗ್‍ಗಾಗಿ ಕೇರಳ ಫಿಲಂ ಅವಾರ್ಡ್ ಪ್ರಶಸ್ತಿ ಲಭಿಸಿದೆ. ಸೆವೆನೆನ್ಸ್, ಕರ್ಮಯೋಗಿ, ದಿ ಹಿಟ್ ಲಿಸ್ಟ್ ಸೇರಿದಂತೆ ಹಲವು ಚಿತ್ರಗಳಿಗೆ ಡಬ್ಬಿಂಗ್ ಮಾಡಿರುವ ರಿಜಭಾವ ಶಿವಕಾಮಿ, ವಿಗ್ರಹಮ್, ಸತ್ಯಂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ರಿಜಭಾವ ಅವರ ನಿಧನಕ್ಕೆ ಮಲಯಾಳಂನ ಸ್ಟಾರ್ ನಟರುಗಳಾದ ಮೋಹನ್‍ಲಾಲ್, ಮಮ್ಮುಟಿ, ಸುಕುಮಾರನ್, ಹಿರಿಯ ನಿರ್ದೇಶಕ ಶಾಜಿ ಕೈಲಾಶ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Facebook Comments