135 ಪ್ರಯಾಣಿಕರಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಭೂ ಸ್ಪರ್ಶ

ಈ ಸುದ್ದಿಯನ್ನು ಶೇರ್ ಮಾಡಿ

ಢಾಕಾ, ಡಿ.2- ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ 135 ಪ್ರಯಾಣಿಕರಿದ್ದ ಮಲೇಷಿಯಾ ಏರ್‍ಲೈನ್ಸ್ ವಿಮಾನವೊಂದು ಢಾಕಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಜರುಗಿದೆ. ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ ಎಂಬುದಾಗಿ ಹಿರಿಯ ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೌಲಾಲಂಪುರದಿಂದ ಢಾಕಾಗೆ ಹೊರಟಿದ್ದ ಎಂಎಚ್-196 ವಿಮಾನವು ಬುಧವಾರ ರಾತ್ರಿ 9.38ರರಲ್ಲಿ ಹಜರತ್ ಷಹಜಾಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಬಿಗಿ ಭದ್ರತೆಯ ನಡುವೆ ತುರ್ತು ಭೂ ಸ್ಪರ್ಶ ಮಾಡಿತು ಎಂದು ಹೆಚ್‍ಎಸ್‍ಐಎ ಕಾರ್ಯನಿರ್ವಾಹಕ ನಿರ್ದೇಶಕ ಗ್ರೂಪ್ ಕ್ಯಾಪ್ಟನ್ ಎಹೆಚ್‍ಎಂ ತೌಹಿದ್-ಉಲ್-ಎಹಸಾನ್ ಸುದ್ದಿಗಾರರಿಗೆ ಹೇಳಿದರು.

ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಕಮಾಂಡೋಗಳು ಮತ್ತು ಭದ್ರತಾ ಏಜೆನ್ಸಿಗಳು ಜಾಗೃತರಾಗಿ ವಿಮಾನ ನಿಲ್ದಾಣದಲ್ಲಿ ಅಗ್ನಿ ಶಾಮಕ ದಳ ಮತ್ತು ಆ್ಯಂಬುಲೆನ್ಸ್‍ಗಳೊಂದಿಗೆ ಸಜ್ಜಾಗಿ ನಿಂತರು. ಭೂ ಸ್ಪರ್ಶ ಮಾಡಿದ ಬಳಿಕ ವಿಮಾನವನ್ನು ಟ್ಯಾಕ್ಸಿ ವೇಯಲ್ಲಿ ನಿಲ್ಲಿಸಿ ವಾಯುಪಡೆಯ ಬಾಂಬ್ ನಿಷ್ಕ್ರಿಯ ದಳವು ಪ್ರಯಾಣಿಕರನ್ನು ತೆರವುಗೊಳಿಸಿ ವಿಮಾನಗಳಲ್ಲಿ ಆಮೂಲಾಗ್ರ ತಪಾಸಣೆ ನಡೆಸಿತು. ಆದಾಗ್ಯೂ ಯಾವುದೇ ಸೋಟಕ ಅಥವಾ ಬಾಂಬ್‍ನಂತಹ ವಸ್ತು ವಿಮಾನದಲ್ಲಾಗಲಿ ಅಥವಾ ಪ್ರಯಾಣಿಕರ ಲಗೇಜ್‍ನಲ್ಲಾಗಲಿ ಕಂಡುಬರಲಿಲ್ಲ.

ಮಲೇಶಿಯಾದಿಂದ ಬಂದಿದ್ದ ಈ ಬಾಂಬ್ ಬೆದರಿಕೆ ಕರೆ ಹುಸಿ ಎಂದು ಸಾಬೀತಾಯಿತು ಎಂದು ಎಹಸಾನ್ ವಿವರಿಸಿದರು. ಕರೆ ಮಾಡಿದಾತನ ಗುರುತು ಮತ್ತು ಮೂಲ ತಿಳಿಸಲು ನಿರಾಕರಿಸಿದ ಅವರು ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್‍ಗೆ ಈ ಕರೆ ಬಂದಿತ್ತು ಎಂದು ಮಾತ್ರ ಹೇಳಿದರು. ಆರ್‍ಎಬಿ ಬಾಂಗ್ಲಾದೇಶ ಪೊಲೀಸ್‍ನ ಅಪರಾಧ ನಿಗ್ರಹ ಮತ್ತು ಭಯೋತ್ಪಾದನಾ ನಿಗ್ರಹ ಘಟಕವಾಗಿದೆ.

Facebook Comments