ಮಹಾರಾಷ್ಟ್ರದ ಸಚಿವರ ಅಳಿಯ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.14- ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂಬುದಕ್ಕೆ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಅವರು ಸಾಕ್ಷಿ.  ಅವರ ರಕ್ತ ಸಂಬಂಧಿ (ಅಳಿಯ ಸಮೀರ್ ಖಾನ್)ಯೊಬ್ಬ ಆನ್‍ಲೈನ್‍ನಲ್ಲಿ ಮಾದಕ ವಸ್ತು ವ್ಯವಹಾರ ನಡೆಸಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಮಾದಕ ವಸ್ತು ನಿಯಂತ್ರಣ ಕೇಂದ್ರ (ಎನ್‍ಸಿಬಿ) ಅಧಿಕಾರಿಗಳು ಗುರುವಾರ ಆತನನ್ನು ಬಂಧಿಸಿರುವುದು ಇದನ್ನು ಸ್ಪಷ್ಟೀಕರಿಸಿದೆ.

ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವ ಮತ್ತು ಎನ್‍ಸಿಪಿ ಮುಖಂಡ ನವಾಬ್ ಮಲಿಕ್ ಈ ಪ್ರಕರಣವನ್ನು ನಮೂದಿಸದೆ, ಕಾನೂನು ಎಲ್ಲರಿಗೂ ಒಂದೆ. ಸಮಯ ಬಂದಾಗ ಅದು ತನ್ನ ಕಾರ್ಯ ಮತ್ತು ಹಕ್ಕನ್ನು ಚಲಾಯಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ನನಗೆ ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಬುಧವಾರ ಎನ್‍ಸಿಬಿ ತಂಡ ಮಲಿಕ್ ಅವರ ಅಳಿಯ ಆರೋಪಿ ಸಮೀರ್ ಖಾನ್‍ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಸಮೀರ್ ಆನ್‍ಲೈನ್‍ನಲ್ಲಿ ಡ್ರಗ್ ಪೆಡ್ಲರ್‍ಗಳ ಸಂಪರ್ಕವಿಟ್ಟುಕೊಂಡಿದ್ದು, 20 ಸಾವಿರ ರೂ.ಗಳ ಡ್ರಗ್ಸ್ ಖರೀದಿಸಲು ವ್ಯವಹಾರ ನಡೆಸಿದ್ದ ಎಂದು ತಿಳಿದುಬಂದಿದೆ.

ಡ್ರಗ್ಸ್ ಅಪರಾಧದಲ್ಲಿ ಸಿಲುಕಿರುವ ಬ್ರಿಟಿಷ್ ಪ್ರಜೆ ಕರನ್  ಮತ್ತು ಇತರ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ಜತೆ ಸಮೀರ್ ಸಂಪರ್ಕ ಇಟ್ಟುಕೊಂಡಿದ್ದು ತನಿಖೆಯಲ್ಲಿ ತಿಳಿದುಬಂದಿದೆ.

Facebook Comments