ಆರ್‌ಎಸ್‌ಎಸ್‌ ಸಂವಿಧಾನ ಬದಲಾಹಿಸುವ ಪ್ಲ್ಯಾನ್ ಮಾಡಿದೆ : ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26-ಸಂವಿಧಾನವನ್ನು ಬದಲಾವಣೆ ಮಾಡಲು ಆರ್‍ಎಸ್‍ಎಸ್ ಯಾವ ರೀತಿಯ ಪ್ಲ್ಯಾನ್ ಮಾಡಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಅವರಿಂದ ಸಂವಿಧಾನ ರಕ್ಷಣೆ ಮಾಡಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ 71ನೇ ಗಣರಾಜ್ಯೋತ್ಸವದ ಬಳಿಕ ಮಾತನಾಡಿದ ಅವರು, ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿರುವ ಸಂವಿಧಾನವನ್ನು ತೆಗೆದು ಹಾಕಬೇಕೆಂದು ಆರ್‍ಎಸ್‍ಎಸ್ ಒಳಗೊಳಗೇ ಪ್ಲ್ಯಾನ್ ಮಾಡುತ್ತಿದೆ. ಧರ್ಮದ ರಾಜಕೀಯದ ಮೂಲಕ ಹಂತ ಹಂತವಾಗಿ ಸಂವಿಧಾನವನ್ನು ಬದಲಾಯಿಸುವ ಸಿದ್ಧತೆಗಳು ನಡೆದಿವೆ. ಇದರ ವಿರುದ್ಧ ನಾವು ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.

ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧದ ಹೋರಾಟಗಳನ್ನು ಬಿಜೆಪಿಯವರು ಹಿಂಸಾತ್ಮಕಗೊಳಿಸಿದ್ದಾರೆ. ಸಮಾಜವನ್ನು ವಿಭಜಿಸಲು ಮನೆ ಮನೆಗೆ ತೆರಳಿ ಸುಳ್ಳು ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗುಡ್ಡಗಾಡು ಜನರಿಗೆ ದಾಖಲೆಗಳಿರುವುದಿಲ್ಲ. ಅವರಿಗೆ ಜನ್ಮ, ಜಾತಕ, ಕುಂಡಲಿಗಳನ್ನು ಬರೆಯಲು ಯಾರೂ ಇರುವುದಿಲ್ಲ. ದಾಖಲೆಗಳನ್ನು ಎಲ್ಲಿಂದ ತರುತ್ತಾರೆ.

ಜನಸಾಮಾನ್ಯರಿಗೆ ತೊಂದರೆ ಕೊಡುವ ಸಲುವಾಗಿಯೇ ಕೇಂದ್ರ ಸರ್ಕಾರ ಇಂತಹ ಕಾನೂನನ್ನು ತರುತ್ತಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ್ಗದವರ ಕಾಳಜಿಗಿಂತಲೂ ತೊಂದರೆ ಕೊಡುವ ಕಾನೂನುಗಳೇ ಹೆಚ್ಚಾಗಿ ಜಾರಿಯಾಗುತ್ತಿವೆ. ಇದರ ವಿರುದ್ಧ ಜನ ಸ್ವಪ್ರೇರಣೆಯಿಂದ ಬೀದಿಗಿಳಿದಿದ್ದಾರೆ. ಕಲಬುರಗಿಯಲ್ಲಿ ಲಕ್ಷಾಂತರ ಜನ ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಆದರೆ ಅವರ ಅವಧಿಯಲ್ಲಿ ನಿರುದ್ಯೋಗದ ಸಮಸ್ಯೆ ಕಳೆದ 45 ವರ್ಷಗಳಿಗಿಂತಲೂ ಹೆಚ್ಚಾಗಿದೆ. ಜಿಡಿಪಿ ಕುಸಿದು ಹೋಗಿದೆ. ದೇಶ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕøತ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಆದರೆ ಬಿಜೆಪಿಯವರು ಅದನ್ನು ತಳ್ಳಿ ಹಾಕುತ್ತಿದ್ದಾರೆ. ಅವರದೇ ಪಕ್ಷದ ಕೆಲವರು ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕøತರಿಗಿಂತಲೂ ಇನ್ಯಾರು ಹೇಳಿದರೆ ನಂಬುತ್ತಾರೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Facebook Comments