ಒಟ್ಟಿಗೇ ಕೂತು ಉಪಹಾರ ಸೇವಿಸಿದ ಖರ್ಗೆ-ಸಿದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26- ಒಂದೇ ಪಕ್ಷದಲ್ಲಿದ್ದರೂ ರಾಜಕೀಯವಾಗಿ ಪರಸ್ಪರ ಸ್ಪರ್ಧಿಗಳಾಗಿದ್ದಾರೆ ಎಂದು ಹೇಳಲಾಗುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಜನಾರ್ಧನ್ ಹೋಟೆಲ್‍ನಲ್ಲಿ ಜತೆಯಾಗಿ ಉಪಹಾರ ಸೇವಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು.

ಅನಂತರ ಸಿದ್ದರಾಮಯ್ಯ ಅವರು ಉಪಹಾರಕ್ಕಾಗಿ ಜನಾರ್ಧನ್ ಹೋಟೆಲ್‍ಗೆ ಆಗಮಿಸಿದರು. ಅವರು ತಿಂಡಿ ತಿಂದು, ಕಾಫಿ ಕುಡಿದು ಹೊರಡುವ ಸಿದ್ದತೆಯಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದರು. ಹೊರಡುವ ತಯಾರಿಯಲ್ಲಿದ್ದ ಸಿದ್ದರಾಮಯ್ಯ ಅವರು ಖರ್ಗೆ ಜತೆ ಉಳಿದುಕೊಂಡರು. ಅವರು ತಿಂಡಿ ತಿಂದು ಕಾಫಿ ಕುಡಿಯುವ ವರೆಗೂ ಮಾತುಕತೆ ಮುಂದುವರೆಸಿದ್ದು ನಂತರ ಇಬ್ಬರೂ ಜತೆಯಾಗಿ ಹೊರ ನಡೆದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್‍ಗೆ ಬಂದ ದಿನದಿಂದಲೂ ಖರ್ಗೆ ಅವರ ಜತೆ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಲೇ ಇದ್ದಾರೆ. ಒಂದು ಹಂತದಲ್ಲಿ ಈ ಇಬ್ಬರ ನಡುವೆ ತೀಕ್ಷಣ ಸ್ಪರ್ಧೆಗಳೂ ನಡೆದಿವೆ. ಮುಖ್ಯಮಂತ್ರಿಯಾಗಿ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸೇರಿದಂತೆ ಹಲವಾರು ಸಂದರ್ಭಗಳಲ್ಲೂ ಪೈಪೋಟಿಗಳು ನಡೆದಿವೆ. ರಾಜಕೀಯವಾಗಿ ಅದೇನೇ ಸ್ಪರ್ಧೆ ಇದ್ದರೂ ವೈಯಕ್ತಿಕವಾಗಿ ಇಬ್ಬರೂ ಆತ್ಮೀಯತೆಯಿಂದ ಮಾತನಾಡುವುದು, ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಮಾದರಿಯಾಗಿದೆ.

ಖರ್ಗೆ ಅವರು ಹೋಟೆಲ್‍ಗೆ ಬಂದಾಗ ಹೊರಟು ನಿಂತಿದ್ದ ಸಿದ್ದರಾಮಯ್ಯ ಅವರು ತಮ್ಮಷ್ಟಕ್ಕೆ ತಾವೇ ಉಳಿದುಕೊಂಡು ಖರ್ಗೆ ಅವರ ಜತೆ ಆತ್ಮೀಯವಾಗಿ ಮಾತನಾಡುತ್ತಾ ಸಮಯ ಕಳೆದರು. ಕಾಂಗ್ರೆಸ್ ಪಾಳಯದಲ್ಲಿ ಇದು ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

Facebook Comments