ಕೇಂದ್ರ ರೈಲ್ವೆ ಸಚಿವರ ರಾಜೀನಾಮೆಗೆ ಖರ್ಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ಕೊರೊನಾ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರಲ್ಲೂ ರೈಲ್ವೆ ಇಲಾಖೆ ವಲಸಿಗ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ವಾಗ್ದಾಳಿ ನಡೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ದೇಶವೇ ಅಲ್ಲೇಲ್ಲ ಕಲ್ಲೇಲ್ಲವಾಗಿದೆ, ವಲಸಿಗರು, ಅಸಂಘಟಿತ, ಸಂಘಟಿತ ಕಾರ್ಮಿಕರು ಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಯಾವುದೇ ಸಹಾಯ ಆಗಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತೊಂದರೆಯಲ್ಲಿವೆ. ಅಲ್ಲಿ ಕೆಲಸ ಮಾಡುವ ಸುಮಾರು 11 ಕೋಟಿ ನೌಕರರ ಬದುಕು ದುಸ್ತರವಾಗಿದೆ. ದೇಶದಲ್ಲಿ ಸುಮಾರು ಎಂಟು ಕೋಟಿ ವಲಸೆ ಕಾರ್ಮಿಕರಿದ್ದಾರೆ. ಅವರ ಜೀವನ ಅಸ್ತವ್ಯಸ್ಥವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ರೈತ ಕಾರ್ಮಿಕರಿಗೂ ತೊಂದರೆಯಾಗಿದೆ. ದವಸ ಧಾನ್ಯ ಉತ್ಪಾದನೆ ಹೆಚ್ಚಾಗಿದ್ದರೂ, ತೋಟಗಾರಿಕೆ ಮತ್ತು ನಾಶವಾಗುವ ಕೃಷಿ ಉತ್ಪನ್ನಗಳು ನಶಿಸಿ ಹೋಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಜನರ ಬಳಿ ಹಣವಿಲ್ಲ, ಮಾರುಕಟ್ಟೆ ಕುಸಿದಿದೆ. ಹಾಗಾಗಿ ಆರ್ಥಿಕ ವಹಿವಾಟು ನಡೆಯುತ್ತಿಲ್ಲ ಎಂದರು. ದೇಶದಲ್ಲಿ ರೈಲ್ವೆ ಇಲಾಖೆ ಇದೆಯೋ ಇಲ್ವೋ ಗೋತ್ತಿಲ್ಲ. ಹದಿಮೂರು ಸಾವಿರ ಸಾರ್ವಜನಿಕ ಸಾರಿಗೆ ರೈಲುಗಳು, ಒಂಬತ್ತು ಸಾವಿರ ಸರಕು ಸಾಗಾಣಿಕೆ ರೈಲುಗಳಿವೆ. ಪ್ರತಿ ದಿನ ಎರಡು ಕೋಟಿ ಮೂವತ್ತು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು.

ದೇಶದಲ್ಲಿ ಎಂಟು ಕೋಟಿ ವಲಸಿಗ ಕಾರ್ಮಿಕರಿದ್ದರೆ ಎಂದರೆ ಅವರಲ್ಲಿ ಸುಮಾರು ಐದು ಕೋಟಿ ಕಾರ್ಮಿಕರು ರೈಲು ಆಶ್ರಯಿಸಬಹುದಿತ್ತು. ಅವರನ್ನೆಲ್ಲೇ ಐದು ದಿನದಲ್ಲಿ ಅವರ ಬಯಸಿದ ಜಗಕ್ಕೆ ಕಳುಹಿಸಲು ಅವಕಾಶ ಇತ್ತು. ಲಾಕ್ ಡೌನ್ ಮೊದಲು ಈ ಕೆಲಸ ಮಾಡಿದ್ದರೆ, ಹಸಿವಿನಿಂದ ಜನಸಾಯುತ್ತಿರಲಿಲ್ಲ. ರೈಲ್ಲೇ ಹಳಿಯ ಮೇಲೆ ಮಲಗಿ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿರಲ್ಲ. ಸಾವಿರಾರು ಕಿ.ಮೀ. ನಡೆದು ಹಸಿವಿನಿಂದ ಸಾಯುತ್ತಿರಲಿಲ್ಲ. ಗರ್ಭಿಣಿಯರು ಗೋಳಾಡುತ್ತಿರಲಿಲ್ಲ ಎಂದು ವಿವರಿಸಿದರು.

ಈವರೆಗೂ 260 ರೈಲುಗಳನ್ನು ಸಂಚರಿಸಿವೆ. ಸುಮಾರು ಮೂರು ಲಕ್ಷ ಕಾರ್ಮಿಕರು ಮಾತ್ರ ಪ್ರಯಾಣಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಒತ್ತಾಯ ಮಾಡದಿದ್ದರೆ ಆ ರೈಲುಗಳು ಸಂಚಾರ ಮಾಡುತ್ತಿರಲಿಲ್ಲ ಎಂದರು. ಸೋಂಕು ಕಡಿಮೆ ಇದ್ದಗ ಲಾಕ್ ಡೌನ್ ಮಾಡಿ, ಸೋಂಕು ಹೆಚ್ಚಾದಾಗ ಲಾಕ್ ಡೌನ್ ಸಡಿಲಗೊಳಿಸಲಾಗಿದೆ. ಮೊದಲೇ ಮುನ್ನೆಚರಿಕೆ ತೆಗೆದುಕೊಂಡಿದ್ದರೆ, ರೈತರಿಗೆ, ಕೈಗಾರಿಕೆಗಳಿಗೆ, ಕಾರ್ಮಿಕರಿಗೆ ತೊಂದರೆಯಾಗುತ್ತಿರಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ನಿಂದ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಸಾಕಷ್ಟು ನೆರವು ನೀಡಲಾಗಿದೆ. ಇದು ದೇಶಕ್ಕಾಗಿ ಮಾಡುವ ಕೆಲಸ, ಮುಂದೆಯೂ ನಮ್ಮ ಪಕ್ಷ ನೆರವು ನೀಡಲಿದೆ ಎಂದ ಆವರು, ಕೊರೊನಾ ವಿಶ್ವಕ್ಕೆ ಬಂದಿದೆ. ಆದರೆ ಮಾನವ ನಿರ್ಮಿತ ತಪ್ಪುಗಳಿಂದ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರದ ತಪ್ಪಿನಿಂದ ದೇಶದಲ್ಲಿ 5408 ಜನ ಸತ್ತಿದ್ದಾರೆ.

ಇದಕ್ಕೆ ಹೊಣೆ ಯಾರು. ಯುದ್ಧ ಕಾಲದಲ್ಲೂ ಇಷ್ಟು ಸಮಸ್ಯೆಯಾಗಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿದೆ. ದೇಶದ ಜಿಡಿಪಿಯಲ್ಲಿ ಶೇ.1ರಷ್ಟು ಖರ್ಚು ಮಾಡುತ್ತಿಲ್ಲ. ಒಂದು ಲಕ್ಷ ಎಪ್ಪತ್ತು ಸಾವಿರ ಕೋಟಿ ಮಾತ್ರ ಬಳಸುತ್ತಿದ್ದಾರೆ. ಪ್ಯಾಕೇಜ್ ಕನ್ನಡಿಯೊಳಗಿನ ಗಂಟಾಗಿದೆ. ಕೈಗಾರಿಕೆಗಳು ಸಾಲ ತೆಗೆದುಕೊಂಡಿದ್ದಾರೆ, ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ವ್ಯಂಗ್ಯವಾಡಿದರು.

ಮಹರಾಷ್ಟ್ರದ ವಲಸಿಗ ಕಾರ್ಮಿಕರಿಗೆ 150 ರೈಲು ನೀಡುವುದಾಗಿ ಪ್ರಕಟಿಸಿ, ಐವತ್ತು ರೈಲು ಮಾತ್ರ ಕೊಟ್ಟರು. ಕರ್ನಾಟಕಕ್ಕೆ ರೈಲು ಕೊಟ್ಟಿಲ್ಲ. ಕಾರ್ಮಿಕರಿಂದ ಪ್ರಯಾಣ ದರ ವಸೂಲಿ ಮಾಡಲಾಗಿದೆ. ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. 30 ಗಂಟೆಯಲ್ಲಿ ತಲುಪಬೇಕಿದ್ದ ರೈಲುಗಳು 70 ಗಂಟೆ ಕಾಲಾವಕಾಶ ತೆಗೆದುಕೊಂಡಿವೆ. ಅಷ್ಟು ಸಮಯ ಪ್ರಯಾಣಿಕರು ರೈಲಿನ ಇರಲು ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮನ್ ಕಿ ಬಾತ್ ನಲ್ಲಿ ನೋವಾಗಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಕಾರ್ಮಿಕರಿಗೆ ಯಾವ ನೆರವನ್ನು ನೀಡಿಲ್ಲ. ಸರ್ಕಾರದ ಕಣ್ಣು, ಕಿವಿ ಮುಚ್ಚಿಕೊಂಡಿದೆ, ಬಾಯಿ ಮಾತ್ರ ತೆಗೆದುಕೊಂಡು ಭಾಷಣ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣ್ಯ ಹೇಳಿದಂತೆ ಜಿಡಿಪಿ ಬೆಳವಣಿಗೆ ಶೇ.1.7 ಎಂದು ಹೇಳಿದ್ದಾರೆ. ಈಗಂತೂ ಶೂನ್ಯವಾಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ದೂರಿದರು.

ಜನವರಿ 30ಕ್ಕೆ ಕೊರೊನಾ ಸೋಂಕು ಪತ್ತೆಯಾಗಿದ್ದರೂ ಮುಂಜಗ್ರತೆ ವಹಿಸದೆ, ಪ್ರಧಾನಿ ಮೋದಿ ಅವರು ಮಾರ್ಚ್ ನಲ್ಲಿ ಗುಜರಾತ್ ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕರೆಸಿ ದೊಡ್ಡ ಕಾರ್ಯಕ್ರಮ ಮಾಡಿದರು ಎಂದು ದೂರಿದರು. ನಾವು ಕೊರೊನಾದಲ್ಲಿ ರಾಜಕಾರಣ ಮಾಡಲ್ಲ, ಆದರೆ ಜನರಿಗೆ ವಾಸ್ತವ ಸ್ಥಿತಿ ತಿಳಿಸಬೇಕಿದೆ. ಕೋವಿಡ್-19 ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಇಷ್ಟು ದಿನ ಸುಮ್ಮನಿದ್ದ. ಸರ್ಕಾರಕ್ಕೆ ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿಲ್ಲ. ಸರ್ಕಾರ ಅದರಲ್ಲೂ ರೈಲ್ವೆ ಇಲಾಖೆ ವೈಪಲ್ಯ ಒಪ್ಪಿಕೊಳ್ಳಬೇಕು.

ವಲಸಿಗ ಕಾರ್ಮಿಕರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆಗೆ ಸ್ಪಿಕರ್ ತಡೆ ನೀಡಿರುವುದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಉತ್ತರ ನೀಡಲು ಸಮರ್ಥರಿದ್ದಾರೆ. ನಾನು ರಾಜ್ಯ ನಾಯಕರ ಅಧಿಕಾರ ವ್ಯಾಪ್ತಿಯಲ್ಲಿ ನಾನು ಹಸ್ತಕ್ಷೇಪ ನಡೆಸಲ್ಲ ಎಂದು ಜರಿಕೊಂಡರು.

ಮಹಾರಾಷ್ಟ್ರದ ಮುಂಬೈಗೆ ದೇಶದ ಮೂಲೆ ಮೂಲೆಯಿಂದ ಬರುತ್ತಾರೆ. ಅಲ್ಲಿ ಸ್ಲಂ ಪ್ರದೇಶದಲ್ಲಿ ಮೂವತ್ತರಿಂದ ನಲವತ್ತು ಲಕ್ಷ ಜನ ಇದ್ದಿದ್ದರಿಂದ ಸೋಂಕು ಹೆಚ್ಚಾಗಿದೆ. ಅಲ್ಲಿನ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ ಎಂದರು. ಮೊದಲೆ ವಲಸಿಗ ಕಾರ್ಮಿಕರನ್ನು ಹೊರಗೆ ಕಳುಹಿಸಿದ್ದರೆ ಸೋಂಕು ಹೆಚ್ಚಾಗುತ್ತಿರಲಿಲ್ಲ. ಸರ್ಕಾರ ನಿರ್ಲಕ್ಷ್ಯವಾಗಿಲ್ಲ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕು, ಮಾಡುತ್ತಿದ್ದಾರೆ.

Facebook Comments