ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜೂನ್ 1- ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿರ್ದೇಶನದ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ತಿಳಿಸಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.  ಒಂಬತ್ತು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಖರ್ಗೆಯವರನ್ನು ಸೋಲಿಸಿದರು.

ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಖರ್ಗೆ ಹಿಂಬಾಗಿಲ ಮೂಲಕ ಶಾಸನಸಭೆ ಪ್ರವೇಶಿಸುತ್ತಿದ್ದಾರೆ. ಪ್ರತಿಬಾರಿಯೂ ನೇರವಾಗಿ ಜನರಿಂದ ಆಯ್ಕೆಯಾಗಿಯೇ ಶಾಸನಸಭೆಗೆ ಪ್ರವೇಶಿಸಿದ್ದ ಖರ್ಗೆ ಈ ಬಾರಿ ಹಿಂಬಾಗಿಲ ಪ್ರವೇಶ ಪಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಯುಪಿಎ 2 ಸರ್ಕಾರವನ್ನು ಕಟ್ಟಿಹಾಕಲು ಸಮರ್ಥ ನಾಯಕರ ಕೊರತೆ ಇದೆ ಹೀಗಾಗಿ. ಖರ್ಗೆ ಅವರನ್ನು ರಾಜ್ಯಸಭೆಯ ಮೂಲಕ ರಾಜಕಾರಣದ ಮುಖ್ಯವಾಹಿನಿಗೆ ಕರೆಸಿಕೊಳ್ಳಲು ಹೈಕಮಾಂಡ್ ಆಸಕ್ತಿ ವಹಿಸಿದೆ.

ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯನ್ನು ಖರ್ಗೆ ನಿಭಾಯಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ಕಾಂಗ್ರೆಸ್ ಸೊರಗಿದೆ. ರಾಜ್ಯಸಭೆಯಲ್ಲೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಮರ್ಥ ನಾಯಕರ ಕೊರತೆ ಇದೆ. ಹೀಗಾಗಿ ಖರ್ಗೆ ರಾಜ್ಯಸಭೆ ಪ್ರವೇಶ ಸುಲಭವಾಗಿದೆ.

ರಾಜ್ಯ ರಾಜಕಾರಣದಲ್ಲಿ ಯಾವುದೇ ಸಮಾಲೋಚನೆ ನಡೆಯದೆ ನೇರವಾಗಿ ಹೈ ಕಮಾಂಡ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಸಂಖ್ಯಾಬಲ ಆದರಿಸಿ ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ಈ ಸ್ಥಾನಕ್ಕೆ ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್, ‌ ಮಾರ್ಗರೇಟ್ ಅಳ್ವಾ, ವೀರಪ್ಪ ಮೈಲಿ, ಕೆಎಚ್ ಮುನಿಯಪ್ಪ ಸೇರಿದಂತೆ ಅನೇಕ ಮಂದಿ ಲಾಬಿ ನಡೆಸಿದರು. ಆದರೆ ಹೈಕಮಾಂಡ್ ರಾಜ್ಯ ನಾಯಕರನ್ನು ಪರಿಗಣಿಸದೆ ನೇರವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

Facebook Comments