ಧರ್ಮೇಗೌಡರ ಆತ್ಮಹತ್ಯೆ ಕುರಿತು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.29- ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದು, ಧರ್ಮೇಗೌಡ ಅವರು ಉತ್ತಮ ಕುಟುಂಬದಿಂದ ಬಂದಿದ್ದರು. ಅವರ ತಂದೆ ನನಗೆ ಚಿರಪರಿಚಿತರು. ಚಿಕ್ಕ ವಯಸ್ಸಿನಲ್ಲೇ ಜೀವನ ಅಂತ್ಯಮಾಡಿಕೊಂಡಿದ್ದು ನನ್ನನ್ನು ತೀವ್ರ ಕಾಡುತ್ತಿದೆ ಎಂದು ವಿಷಾದಿಸಿದ್ದಾರೆ. ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಟ್ವಿಟ್ ಮಾಡಿದ್ದು, ಧರ್ಮೇಗೌಡರ ಅಕಾಲಿಕ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ.

ಒಬ್ಬ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ ಈ ರೀತಿ ಅಗಲಿದ್ದು ನನ್ನನ್ನು ನೋವಿನೊಂದಿಗೆ ಕಾಡುತ್ತಿದೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಯ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡುವುದರೊಂದಿಗೆ ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪಾರ್ಥಿಸುವುದಾಗಿ ಹೇಳಿದ್ದಾರೆ.

ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಅವರ ಸಾವಿನ ಸುದ್ದಿ ನಿಜಕ್ಕೂ ಬರಸಿಡಿಲಿನ ಆಘಾತ ತಂದಿದೆ. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವ ಆತುರದ ನಿರ್ಧಾರ ಕೈಗೊಳ್ಳಬಾರದಿತ್ತು. ಅವರ ಕೆಟ್ಟ ನಿರ್ಧಾರ ಎಲ್ಲರಿಗೂ ನೋವು ತಂದಿದೆ. ಅವರ ಕುಟುಂಬದ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ. ಧರ್ಮೇಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.

ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ನಂಬಲಿಕ್ಕೆ ಆಗ್ತಾ ಇಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ಅವರ ಪರಿವಾರದವರಿಗೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಶೋಕ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಸೇರಿದಂತೆ ಅನೇಕ ನಾಯಕರು ಧರ್ಮೇಗೌಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments