ಮೋದಿಯನ್ನು ನೀರೋಗೆ ಹೋಲಿಸಿ ಖರ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.17- ಕೊರೊನಾ ಸೋಂಕಿನಿಂದ ದೇಶದಲ್ಲಿ 1.73 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೂ ನಮ್ಮ ನೀರೋ ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಕೊರೊನಾ ಸೋಂಕು ಹೆಚ್ಚಳದ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ತರಾವರಿ ರೀತಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಟ್ವಿಟ್ ಖಾತೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರೋಮ್ ದೊರೆ ನೀರೋಗೆ ಹೋಲಿಸಿದ್ದಾರೆ. ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ನಮ್ಮ ನೀರೋ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 1.73 ಲಕ್ಷಕ್ಕೆ ಏರಿದೆ. ದಿನವೊಂದಕ್ಕೆ ಎರಡು ಲಕ್ಷ ಮಂದಿ ಸೋಂಕಿತರಾಗುತ್ತಿದ್ದಾರೆ.

ಲಸಿಕೆ, ಆಮ್ಲಜನಕ, ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ರೆಮ್‍ಡಿಸಿವಿರ್ ಔಷಧಿ ಇಲ್ಲದೆ ಅವ್ಯವಸ್ಥೆಯಾಗಿದೆ ಎಂದು ಖರ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ. ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದಿದೆ, ನಮ್ಮ ದೇಶದ ನೀರೋ ಯಾವಾಗ ಆಡಳಿತ ಶುರು ಮಾಡುತ್ತಾರೆಂದು ನಿರೀಕ್ಷಿಸಬಹುದು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ಕೊರೊನಾ ರಣತಂತ್ರ ಹೇಗಿದೆ ಎಂದರೆ ಮೊದಲ ಹಂತದಲ್ಲಿ ಲಾಕ್‍ಡೌನ್ ಜಾರಿ ಮಾಡುವುದು. ಎರಡನೆ ಹಂತದಲ್ಲಿ ಗಂಟೆ ಬಾರಿಸುವುದು, ಮೂರನೆ ಹಂತದಲ್ಲಿ ದೇವರ ನಾಮಗಳನ್ನು ಹಾಡುವುದು ಎಂದು ಲೇವಡಿ ಮಾಡಿದ್ದಾರೆ.

Facebook Comments