ಐಟಿ ದಾಳಿ ರಾಜಕೀಯ ಪ್ರೇರಿತ : ಮಲ್ಲಿಕಾರ್ಜುನ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಅ.10-ಐಟಿ ದಾಳಿ ರಾಜಕೀಯಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದೆ. ಕಾಂಗ್ರೆಸ್ ಕಾರ್ಯಕರ್ತರ ಬಲ ಕುಗ್ಗಿಸಲು ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿಪರಮೇಶ್ವರ್ ಹಾಗೂ ಹಿರಿಯ ಮುಖಂಡ ಜಾಲಪ್ಪ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆಗಳ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಕೇವಲ ಒಂದು ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರ ಬಲ ಕುಗ್ಗಿಸಲು ಈ ತಂತ್ರ ಅನುಸರಿಸಲಾಗುತ್ತಿದೆ. ಇಂತಹ ರಾಜಕೀಯ ಪ್ರೇರಿತ ದಾಳಿಗಳು ನಿಲ್ಲಬೇಕು. ದುರುದ್ದೇಶದಿಂದ ಕೂಡಿರುವ ಐಟಿ ದಾಳಿಗಳು ಸರಿಯಾದ ಕ್ರಮ ಅಲ್ಲ ಎಂದು ಖರ್ಗೆ ಹೇಳಿದರು. ಐಟಿ ದಾಳಿ ಬಗ್ಗೆ ನಾವು ಯಾವುದೇ ಆಕ್ಷೇಪ ಮಾಡುವುದಿಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಆ ಸಂಸ್ಥೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ ಎಂದು ಹೇಳಿದರು.

Facebook Comments