ಮಹಾರಾಷ್ಟ್ರದ ಮಾದರಿಯಲ್ಲೇ ಕರ್ನಾಟಕದಲ್ಲೂ ಪಕ್ಷಾಂತರಿಗಳು ಸೋಲ್ತಾರೆ : ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1-ಮಹಾರಾಷ್ಟ್ರದ ಮಾದರಿಯಲ್ಲೇ ಕರ್ನಾಟಕದಲ್ಲೂ ಪಕ್ಷಾಂತರ ಮಾಡಿದವರು ಉಪಚುನಾವಣೆಗಳಲ್ಲಿ ಸೋಲುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಒತ್ತಡ, ಆಮಿಷ, ಬೆದರಿಕೆಗಳಿಗೆ ಹೆದರಿ ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದ ಕಾಂಗ್ರೆಸ್ ಹಾಗೂ ಎನ್‍ಸಿಪಿಯ ಬಹಳಷ್ಟು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಆದರೆ ಅವರಲ್ಲಿ ಶೇ.70ರಷ್ಟು ಮಂದಿ ಸೋಲು ಕಂಡಿದ್ದಾರೆ. ಈಗ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲೂ ಪಕ್ಷಾಂತರಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 100ಕ್ಕೆ ನೂರರಷ್ಟು ಜನ ಅವರನ್ನು ಸೋಲಿಸುತ್ತಾರೆ ಎಂದು ಹೇಳಿದರು. ಸಿದ್ಧಾಂತ ಹಾಗೂ ಒಂದು ಪಕ್ಷದ ಕಾರ್ಯಕ್ರಮಗಳ ಮೇಲೆ ಮತ ಪಡೆದು ಆಯ್ಕೆಯಾದವರು ವಿವಿಧ ಕಾರಣಗಳಿಂದಾಗಿ ಪಕ್ಷ ಬಿಟ್ಟು ಹೋಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಜನ ಅವರನ್ನು ಕ್ಷಮಿಸುವುದಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಜನರ ಮೂಲಭೂತ ಹಕ್ಕು ರಕ್ಷಣೆಯಾಗಬೇಕಾದರೆ ಹಣದ ಪ್ರಭಾವಕ್ಕೆ ಒಳಗಾಗದೆ ಜನ ಪಕ್ಷಾಂತರಿಗಳನ್ನು ಸೋಲಿಸಬೇಕು ಎಂದುಕರೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರು ಸಿದ್ಧಾಂತದ ಆಧಾರದ ಮೇಲೆ ಪಕ್ಷಾಂತರ ಮಾಡಿದ್ದರೆ ಅದನ್ನು ಒಪ್ಪಬಹುದಿತ್ತು. ಮುಖ್ಯಮಂತ್ರಿಗಳು ನಮ್ಮ ಕೇಳುತ್ತಿಲ್ಲ, ನಮ್ಮ ಕೆಲಸಗಳಾಗುತ್ತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹೆಚ್ಚು ಲಾಭ ಪಡೆದವರೇ ಈ ರೀತಿಯ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದರು.

2004ರಿಂದ ಚುನಾವಣೆಯಲ್ಲಿ ಹಣದ ಬಳಕೆ ಹೆಚ್ಚಾಗಿದೆ. ಅದು ಬಳ್ಳಾರಿಯಿಂದಲೇ ಆರಂಭವಾಯಿತು. ಬಿಜೆಪಿಯವರು ಹಣದ ಪ್ರಭಾವ ಬಳಸುತ್ತಾರೆ. ಅದು ಯಶಸ್ವಿಯಾಗದೆ ಇದ್ದರೆ ಧರ್ಮ ಹಾಗೂ ಜಾತಿ ಎಂಬ ಭಾವನಾತ್ಮಕ ವಿಷಯ ಬಳಸಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.

ಮೋದಿ ವಿರುದ್ಧ ಆಕ್ರೋಶ:
ರಾಜ್ಯದ ಬೆಳಗಾವಿ, ಮಡಿಕೇರಿ ಹಾಗೂ ಮಹಾರಾಷ್ಟ್ರದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೂ ಭೇಟಿ ನೀಡಲಿಲ್ಲ. ನೆರೆ ಪರಿಹಾರಕ್ಕೆ ಹಣವನ್ನೂ ನೀಡಲಿಲ್ಲ. ಯಡಿಯೂರಪ್ಪ ಅವರ ಮೇಲಿನ ಸಿಟ್ಟನ್ನು ಮೋದಿಯವರು ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಲಬುರಗಿಯ ವಿಮಾನ ನಿಲ್ದಾಣ ರಾಜ್ಯದಲ್ಲೇ ಅತಿ ಉದ್ದದ ರನ್‍ವೇ ಹೊಂದಿದೆ. ಸಂಪೂರ್ಣ ರಾಜ್ಯದ ಹಣದಿಂದಲೇ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಅದರ ಉದ್ಘಾಟನೆಗೆ ಮೋದಿ ಬರಬೇಕಿತ್ತು, ಆದರೆ ಯಡಿಯೂರಪ್ಪ ಮುಖ ನೋಡಲು ಇಷ್ಟವಿಲ್ಲದ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಕಲಬುರಗಿ-ಬೀದರ್ ನಡುವಿನ ರೈಲ್ವೆ ಕಾಮಗಾರಿ ಪೈಕಿ ಕಲಬುರಗಿ ಭಾಗದಲ್ಲೇ ಕೆಲಸ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಯನ್ನು ಬೀದರ್‍ನಲ್ಲಿ ನೆರವೇರಿಸಿದರು.

ಮೋದಿಯವರಿಗೆ ಕರ್ನಾಟಕದ ಬಗ್ಗೆ ಹೆಚ್ಚು ನಿರ್ಲಕ್ಷ್ಯತೆ ಇದೆ. ರಾಜ್ಯದ ಯಾವ ಯೋಜನೆಗಳಿಗೂ ತಕ್ಷಣವೇ ಮಂಜೂರಾತಿ ನೀಡುವುದಿಲ್ಲ. ಹಣಕಾಸು ನೀಡುವುದರಲ್ಲೂ ವಿಳಂಬ ಮಾಡುತ್ತಾರೆ. ರಾಜ್ಯ, ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಹೆಚ್ಚು ಅನುದಾನ ತರಬಹುದು ಎಂದು ಬಿಜೆಪಿಯವರು ಪ್ರಚಾರ ಮಾಡಿದರು. ಆದರೆ ನೆರೆಗೆ ಹಣ ಬಂದಿಲ್ಲ. ಜನ ಈ ಕಾರಣಕ್ಕಾಗಿ ಬಿಜೆಪಿಯನ್ನು ಸೋಲಿಸಿ ಶಿಕ್ಷೆ ನೀಡಬೇಕಿದೆ ಎಂದು ಹೇಳಿದರು.

ಜಿಡಿಪಿ ಶೇ.4.5ಕ್ಕೆ ಕುಸಿದಿದೆ. ಇತಿಹಾಸದಲ್ಲೇ ಅತಿ ಹೆಚ್ಚು ನಿರುದ್ಯೋಗ ದಾಖಲಾಗಿದೆ. ಈರುಳ್ಳಿ ಬೆಲೆ 120 ರೂ. ಏರಿಕೆ ಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದ್ಯಾವುದನ್ನೂ ನಿಯಂತ್ರಿಸುವ ಗೋಜಿಗೆ ಸರ್ಕಾರಗಳು ಹೋಗುತ್ತಿಲ್ಲ. ಆದರೆ ಅಧಿಕಾರ ಹಿಡಿಯುವ ವಿಷಯದಲ್ಲಿ ಮಾತ್ರ ಹೆಚ್ಚು ಆಸಕ್ತಿ ತೋರುತ್ತಿವೆ ಎಂದುಹೇಳಿದರು.

ಮಹಾರಾಷ್ಟ್ರದಲ್ಲಿ ಬೆಳಗಿನ ಜಾವ 4.30ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿ 7.15ಕ್ಕೆ ನೂತನ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸುತ್ತಾರೆ. ಇಷ್ಟು ತರಾತುರಿಯನ್ನು ಹಿಂದೆಂದೂ ನೋಡಿರಲಿಲ್ಲ. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದ ಜೊತೆ ಕೈ ಜೋಡಿಸಲು ಸೋನಿಯಾಗಾಂಧಿಯವರಿಗೆ ಇಷ್ಟವಿರಲಿಲ್ಲ. ಆದರೆ ಪ್ರಗತಿಪರರು ಹಾಗೂ ಇತರ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ನಾವು ಮೈತ್ರಿಯ ಭಾಗವಾಗಿದ್ದೇವೆ ಎಂದು ಹೇಳಿದರು.

Facebook Comments