ಖರ್ಗೆಗೆ ಸಿಎಂ ಆಗುವ ಅವಕಾಶ ಸಿಗದಕ್ಕೆ ತೀವ್ರ ನಿರಾಶೆಯಾಗಿದೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

DCM--parameswar
ಬೆಂಗಳೂರು, ಜು.20- ಮಲ್ಲಿಕಾರ್ಜುನ ಖರ್ಗೆ ಅವರಂತಹ ಅನುಭವಿ ಆಡಳಿತಗಾರರು ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸಲು ಅವಕಾಶ ಸಿಗದೇ ಇರುವುದು ತೀವ್ರ ನಿರಾಶೆ ಮೂಡಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು. ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಪೊಲಿಟಿಕಲ್ ಅಡ್ವೈಸರ್ ಪತ್ರಿಕೆಯ ಶಾಂತರಾಜು ಅವರು ಮಲ್ಲಿಕಾರ್ಜುನ ಖರ್ಗೆ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ ಹೊರ ತಂದಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಖರ್ಗೆ ಅವರು ಸತತವಾಗಿ 11 ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಸೋಲನ್ನೇ ಕಂಡಿಲ್ಲ. ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳಲ್ಲೂ ಸಚಿವರಾಗಿ ಕೆಲಸ ಮಾಡಿದ್ದು, ಕೇಂದ್ರದಲ್ಲೂ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ ಎಂದರು.

ದೂರದೃಷ್ಟಿ ಹಾಗೂ ಸಾಮಾಜಿಕ ಬದ್ಧತೆ ಇರುವ ಉತ್ತಮ ಆಡಳಿತಗಾರ ಖರ್ಗೆ ಅವರು ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸಲು ಅವಕಾಶ ಸಿಗಲಿಲ್ಲ ಎಂಬುದೇ ನಿರಾಶೆ ಮೂಡಿಸುತ್ತಿದೆ. ನನ್ನ ವಿದ್ಯಾರ್ಥಿ ಜೀವನದಿಂದಲೂ ಖರ್ಗೆ ಅವರ ಜತೆ ಒಡನಾಟವಿದೆ. ಸಿದ್ದಾರ್ಥ ಸಂಸ್ಥೆಯಲ್ಲಿ 18 ವರ್ಷ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದರು. ಶೋಷಿತ ವರ್ಗದವರಿಗೆ ದನಿಯಾಗಿದ್ದರು. ಹಾಗೆಯೇ ಎಲ್ಲಾ ವರ್ಗಗಳಿಗೂ ಅವರು ಜನನಾಯಕರಾಗಿದ್ದಾರೆ ಎಂದು ಹೇಳಿದರು. ಖರ್ಗೆ ಅವರನ್ನು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕರನ್ನಾಗಿ ನೇಮಿಸಿದಾಗ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಮೊದಲ ಸಂಸತ್ ಅಧಿವೇಶನ ಮುಗಿದ ನಂತರ ನಾನು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದೆ, ಆಗ ಖರ್ಗೆ ಅವರ ಕಾರ್ಯನಿರ್ವಹಣೆಯ ಬಗ್ಗೆ ಸೋನಿಯಾ ಗಾಂಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ನಮ್ಮ ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ಸದಸ್ಯ ಸದಾಶಿವ ಶೆಣೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಕಾಶಂ, ಕಾರ್ಯದರ್ಶಿ ಆನಂದ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

Facebook Comments

Sri Raghav

Admin