ನಿರ್ಮಲಾ ‘ದೇವರ ಆಟ’ ಹೇಳಿಕೆಗೆ ಖರ್ಗೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದೇವರ ಆಟ ಎಂದು ಹೇಳಿಕೊಂಡು ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರ ಪಾವತಿಸದಿದ್ದರೆ ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಗೆ ಘಾಸಿಯಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ಸಭಾಸದಸ್ಯ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.

ಕೊರೊನಾ ದೇವರ ಆಟ, ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಈ ಸಂದರ್ಭದಲ್ಲಿ ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಮೊದಲಿದ್ದ ವ್ಯಾಟ್ ತೆರಿಗೆ ಪದ್ಧತಿಯನ್ನು ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ಜಿಎಸ್‍ಟಿ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ವ್ಯಾಟ್ ಸಂದರ್ಭದಲ್ಲಿ ಸಂಗ್ರಹವಾಗುತ್ತಿದ್ದ ತೆರಿಗೆ ಮೊತ್ತಕ್ಕಿಂತ ಜಿಎಸ್‍ಟಿ ಸಂಗ್ರಹ ಕಡಿಮೆಯಾದರೆ ವ್ಯತ್ಯಾಸದ ಮೊತ್ತವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಪಾವತಿಸುವ ಷರತ್ತನ್ನು ಕೇಂದ್ರ ಸರ್ಕಾರ ಕಾಯ್ದೆಯಲ್ಲಿ ಅಳವಡಿಸಿದೆ.

ಜಿಎಸ್‍ಟಿ ಸಂಗ್ರಹದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಮಪಾಲಿದೆ. ಸರಕು ಮತ್ತು ಸೇವಾ ತೆರಿಗೆ ಪರಿಷತ್ ಸಂಗ್ರಹವಾದ ಮೊತ್ತದಲ್ಲಿ ರಾಜ್ಯದ ಪಾಲನ್ನು ಕಾಲ ಕಾಲಕ್ಕೆ ಬಿಡುಗಡೆ ಮಾಡುತ್ತದೆ. ನಷ್ಟದ ಬಾಬ್ತನ್ನು ಬಿಡುಗಡೆ ಮಾಡುವಲ್ಲಿ ಕೆಲ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಅದರಲ್ಲೂ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಗಳ ನಷ್ಟವಾಗಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕಾದ ನಷ್ಟವನ್ನು ತುಂಬಿಕೊಡಲು ಮನಸ್ಸು ಮಾಡಿಲ್ಲ. ಈಗ ನಿರ್ಮಲಾ ಸೀತಾರಾಂ ಅವರು ದೇವರ ಮೇಲೆ ಭಾರ ಹಾಕಿ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ಪಾವತಿಸಲು ಅಸಹಾಯಕತೆ ವ್ಯಕ್ತ ಪಡಿಸಿದ್ಧಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯ ಸರ್ಕಾರಗಳು ಈಗಾಗಲೇ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ದೇವರ ಆಟ ಎಂದು ನೆಪ ಹೇಳಿಕೊಂಡು ಜಿಎಸ್‍ಟಿ ಪರಿಹಾರ ಪಾವತಿಯಿಂದ ಜಾರಿಕೊಳ್ಳುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತದೆ ಎಂದಿದ್ದಾರೆ ಎಂದಿದ್ದಾರೆ.

ಕೇಂದ್ರ ಸರ್ಕಾರ ನಷ್ಟ ಪರಿಹಾರ ಪಾವತಿಸುವ ಆಶ್ವಾಸನೆ ನೀಡಿತ್ತು ಅದರಂತೆ ನಡೆದುಕೊಳ್ಳಬೇಕು. ಈಗಾಗಲೇ ಹಲವಾರು ಬಗೆಯ ಆರ್ಥಿಕೆ ಸಮಸ್ಯೆಗಳಿಂದ ಬಳಲುತ್ತಿರುವ ರಾಜ್ಯಗಳಿಗೆ ನೆರವಾಗಲು ಕೇಂದ್ರ ಸರ್ಕಾರವೂ ಕೈ ಚೆಲ್ಲಿದ್ದರೆ ಮತ್ತಷ್ಟು ಹಾನಿಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin