ಕೊಲೆ ಮಾಡಿಸಿ ಜನರನ್ನು ಬೆದರಿಸಬೇಡಿ : ಮೋ-ಶಾಗೆ ದೀದಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ,ಏ.11- ರಾಜಕೀಯವಾಗಿ ಪಶ್ಚಿಮ ಬಂಗಾಳವನ್ನು ವಶಪಡಿಸಿಕೊಳ್ಳಲು ಹಂಬಲಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಜನರಲ್ಲಿ ಭಯ ಹುಟ್ಟಿಸುತ್ತಿದ್ದು, ಕೇಂದ್ರದ ಭದ್ರತಾ ಪಡೆಗಳ ಮೂಲಕ ಕೊಲೆ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ನಿನ್ನೆ ಕೋಚ್ ಬೆಹರ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ವೇಳೆ ಆತ್ಮರಕ್ಷಣೆಗಾಗಿ ಕೇಂದ್ರ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಐದನೇ ಹಂತದ ಚುನಾವಣಾ ಪ್ರಚಾರಕ್ಕಾಗಿ ನಿಗದಿಯಾಗಿದ್ದ ರ್ಯಾಲಿಗಳನ್ನು ರದ್ದುಪಡಿಸಿ ಗೋಲಿಬಾರ್‍ನಿಂದ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಆದರೆ, ಜಿಲ್ಲಾಡಳಿತ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಪ್ರವೇಶವಿಲ್ಲ ಎಂದು ನಿಷೇಧ ಹೇರಿತ್ತು.

ಇದರಿಂದ ಸಿಟ್ಟಾಗಿರುವ ಮಮತಾ ಬ್ಯಾನರ್ಜಿ ಅವರು, ಮಾದರಿ ನೀತಿ ಸಂಹಿತೆ (ಎಂಸಿಸಿ) ಈಗ ಬಿಜೆಪಿಯ ನೀತಿ ಸಂಹಿತೆ (ಬಿಸಿಸಿ)ಯಾಗಿದೆ ಎಂದು ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಅಸಮರ್ಥ ಸರ್ಕಾರ ಅಧಿಕಾರದಲ್ಲಿದ್ದು, ಅಸಮರ್ಥ ಪ್ರಧಾನಿ ಮತ್ತು ಗೃಹ ಸಚಿವರು ಆಡಳಿತ ನಡೆಸುತ್ತಿದ್ದಾರೆ. ಅವರು ಪ್ರತಿ ದಿನ ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದು, ಇಲ್ಲಿನ ಅಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಸ್ವಾಗತಿಸುತ್ತೇವೆ. ಯಾರೂ ಅವರನ್ನು ಅಡ್ಡಿಪಡಿಸುವುದಿಲ್ಲ. ಆದರೆ, ಅವರ ಕಾರ್ಯಕ್ರಮಗಳಿಂದ ಜನ ಖುಷಿಯಾಗಿರಬೇಕು. ಬೆದರಿಸಬಾರದು. ಕೇಂದ್ರದ ಭದ್ರತಾ ಪಡೆಗಳಿಂದ ಜನರನ್ನು ಕೊಲೆ ಮಾಡಿಸಬಾರದು ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಈಗ ಜನರ ಮೇಲೆ ಗುಂಡು ಹಾರಿಸುವ ಸರ್ಕಾರ ನಂತರ ಗುಂಡು ಹಾರಿಸಿದವರನ್ನು ಆರೋಪ ಮುಕ್ತಗೊಳಿಸಲಿದೆ ಎಂದು ಕಿಡಿಕಾರಿದ್ದಾರೆ. ದಿನೇ ದಿನೆ ಪಶ್ಚಿಮ ಬಂಗಾಳದ ಚುನಾವಣಾ ಕಣ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಜಿದ್ದಾಜಿದ್ದಿ ತೀವ್ರಗೊಂಡಿದೆ. ಆರೋಪ, ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ.

ಗಲಭೆ ಪೀಡಿತ ಜಿಲ್ಲೆಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ತಮಗೆ ಅಡ್ಡಿಪಡಿಸುತ್ತಿರುವುದರ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದು, ಆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾತನಾಡುವುದಾಗಿ ನಾನು ಭರವಸೆ ನೀಡಿದ್ದೇನೆ. ನಾನು ಅಲ್ಲಿಗೆ ಹೋಗಲೇಬೇಕು.

ಒಂದು ವೇಳೆ ನನ್ನಿಂದ ಶಾಂತಿ ಭಂಗವಾಗಿದ್ದೇ ಆದರೆ ಆಗ ತಡೆಹಿಡಿಯಿರಿ. ಅದರ ಬದಲು ಭೇಟಿ ನೀಡಲು ಅವಕಾಶ ನೀಡದೆ ಇರುವುದು ಸರಿಯಲ್ಲ ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆಯೂ ಜಿಲ್ಲಾಡಳಿತ ನಿಷೇಧ ಹಿಂಪಡೆಯದಿದ್ದಾಗ ಒಂದು ಕುಟುಂಬದ ಸದಸ್ಯರ ಜತೆ ವಿಡಿಯೋ ಕಾನರನ್ಸ್ ಮೂಲಕವೇ ಅವರು ಮಾತುಕತೆ ನಡೆಸಿದ್ದಾರೆ.

Facebook Comments

Sri Raghav

Admin