ಬಿಜೆಪಿ ಮೂಲೆಗುಂಪು ಮಾಡುವಂತೆ ರಾಜಕೀಯ ಪಕ್ಷಗಳಿಗೆ ದೀದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುರುಲಿಯಾ(ಪ.ಬಂ), ಡಿ.30-ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ದೇಶದ ಜನರಲ್ಲಿ ಆತಂಕ ಸೃಷ್ಟಿಸಿ, ಹಿಂಸಾಚಾರಕ್ಕೆ ಕಾರಣವಾಗಿ ಜನರ ಕಾನೂನುಬದ್ಧ ಪೌರತ್ವ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿರುವ ಬಿಜೆಪಿಯನ್ನು ಮೂಲೆಗುಂಪು ಮಾಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಮತ್ತು ನಾಗರಿಕ ಸಮಾಜ ಸಂಘಟನೆಗಳಿಗೆ ಕರೆ ನೀಡಿದ್ದಾರೆ.

ದೇಶದಲ್ಲಿ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲ ಬಿಜೆಪಿಯನ್ನು ಮೂಲೆಗುಂಪು ಮಾಡಲು ಸಮಾನ ಮನಸ್ಕ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘ ಸಂಸ್ಥೆಗಳು ಕೈ ಜೋಡಿಸುವಂತೆ ದೀದಿ ಕರೆ ನೀಡಿದರು. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿಂದು ಐದು ಕಿಲೋ ಮೀಟರ್ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವಾದಿತ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ತಮ್ಮನ್ನು ದೇಶದ್ರೋಹಿ ಎಂದು ಬಿಂಬಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೀದಿ ಹರಿಹಾಯ್ದರು.

ಕೇಂದ್ರ ಸರ್ಕಾರವು ನಮ್ಮ ನಾಗರಿಕರ ಕಾನೂನು ಬದ್ಧ ಪೌರತ್ವ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ. ನಮ್ಮ ರಾಜ್ಯದಲ್ಲಿ ಇದಕ್ಕೆ ನಾನು ಆಸ್ಪದ ನೀಡುವುದಿಲ್ಲ. ಈ ಅಧಿನಿಯಮ ವಾಪಸ್ ತೆಗೆದುಕೊಳ್ಳುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮ್ಮ ರಾಜ್ಯದಲ್ಲಿರುವವರು ಯಾರೂ ಇಲ್ಲಿಂದ ಹೊರ ಹೋಗಬೇಕಿಲ್ಲ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಂಡಿರುವುದನ್ನು ಖಾತ್ರಿ ಮಾಡಿಕೊಳ್ಳಿ, ಮಿಕ್ಕ ವಿಷಯ ನನಗೆ ಬಿಡಿ ಎಂದು ಮಮತಾ ಗುಡುಗಿದರು.

Facebook Comments

Sri Raghav

Admin