ಮೋದಿ ಮೇಲೆ ಕೆಮಿಕಲ್ ಅಟ್ಯಾಕ್ ಮಾಡುವುದಾಗಿ ಬೆದರಿಸಿದ್ದ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Modi--01
ಮುಂಬೈ, ಜು.30-ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ 22 ವರ್ಷದ ಸೆಕ್ಯುರಿಟಿ ಗಾರ್ಡ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿನಾಥ್ ಮಂಡಲ್ ಬಂಧಿತ ವ್ಯಕ್ತಿ. ಈತ ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ) ನಿಯಂತ್ರಣ ಕೊಠಡಿಗೆ ಫೋನ್ ಮಾಡಿ ಪ್ರಧಾನಿ ಮೋದಿ ಅವರ ಮೇಲೆ ಕೆಮಿಕಲ್ ಅಟ್ಯಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ಧ. ಈ ಹಿನ್ನೆಲೆಯಲ್ಲಿ ಮಧ್ಯ ಮುಂಬೈ ಪ್ರದೇಶದಲ್ಲಿ ಡಿ.ಬಿ.ಮಾರ್ಗ್ ಠಾಣೆ ಪೊಲೀಸರು ಈತನನ್ನು ಬಂಧಿಸಿದರು.

ನವದೆಹಲಿಯಲ್ಲಿನ ಎನ್‍ಎಸ್‍ಜಿ ಕಂಟ್ರೋಲ್ ರೂಮ್ ಸಂಪರ್ಕ ಸಂಖ್ಯೆ ಪಡೆದಿದ್ದ ಈತ ಶುಕ್ರವಾರ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಈ ಬೆದರಿಕೆ ಹಾಕಿದ್ದ. ಈ ಫೋನ್ ಕರೆಯ ಜಾಡು ಪತ್ತೆ ಮಾಡಿದಾಗ ಅದು ಮುಂಬೈನಿಂದ ಬಂದ ಕರೆಯಾಗಿತ್ತು. ತಕ್ಷಣ ಎನ್‍ಎಸ್‍ಜಿ ಆಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ ಪೊಲೀಸರು ಕಾಶಿನಾಥ್ ಮಂಡಲ್‍ನನ್ನು ಬಂಧಿಸಿದರು. ಈತ ಜಾರ್ಖಂಡ್ ಮೂಲದ ವ್ಯಕ್ತಿ. ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಈತ ಮುಂಬೈನ್ ವಲ್ಕೇಶ್ವರ್ ಪ್ರದೇಶದಲ್ಲಿ ನೆಲೆಸಿದ್ದ, ಸೂರತ್‍ಗೆ ತೆರಳುತ್ತಿದ್ದ ರೈಲನ್ನು ಕಾಶಿನಾಥ್ ಹತ್ತುತ್ತಿದ್ದಾಗ ಆತನನ್ನು ಪೊಲೀಸರು ಸೆರೆ ಹಿಡಿದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ, ಜಾರ್ಖಂಡ್‍ನಲ್ಲಿ ಇತ್ತೀಚೆಗೆ ನಡೆದ ನಕ್ಸಲರ ದಾಳಿಯಲ್ಲಿ ತನ್ನ ಸ್ನೇಹಿತ ಹತನಾಗಿದ್ದು, ಈ ಹಿನ್ನೆಲೆಯಲ್ಲಿ ತಾನು ಪ್ರಧಾನಿಯವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾಗಿ ತಿಳಿಸಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Facebook Comments

Sri Raghav

Admin