ವಿಚ್ಛೇದಿತ ಮಹಿಳೆಯರೇ ಈ ‘ನಯವಂಚಕ’ನ ಟಾರ್ಗೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.10- ವಿಚ್ಛೇದಿತ ಮಹಿಳೆಯನ್ನು ಪರಿಚಯಿಸಿಕೊಂಡು ವಿವಾಹವಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಮೈಸೂರು ತಾಲ್ಲೂಕು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ವಾಸಿ ಸುರೇಶ್ ಬಂಧಿತ ಆರೋಪಿಯಾಗಿದ್ದು, ಮೂಲತಃ ಈತ ಮೈಸೂರಿನವನು.

ಸುರೇಶ್ ಆನ್‍ಲೈನ್‍ನಲ್ಲಿ ಬರುವ ಮ್ಯಾಟ್ರಮೋನಿಯಲ್ಲಿ ದುಡಿಯುವ ವಿಚ್ಛೇದಿತ ಮಹಿಳೆಯರನ್ನು ಗುರುತಿಸಿ ಪರಿಚಯ ಮಾಡಿಕೊಂಡು ವಿವಾಹವಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ.

ಹೀಗೆ ಬೆಂಗಳೂರಿನ ವಿಚ್ಛೇದಿತ ಮಹಿಳೆಯನ್ನು ಪರಿಚಯಿಸಿಕೊಂಡ ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದ. ವಿವಾಹವಾಗಿ ನೆಲೆಯೂರಬೇಕಾದರೆ ಮನೆ ಬೇಕು, ಅದಕ್ಕಾಗಿ ಸೈಟ್ ಖರೀದಿಸೋಣ ಎಂದು ಹೇಳಿ 10 ಲಕ್ಷ ರೂ.ಗೆ ಪುಸಲಾಯಿಸಿದ್ದ.

ಇದನ್ನು ನಂಬಿದ ಮಹಿಳೆ ತನ್ನ ಬಳಿ ಇದ್ದ 80 ಗ್ರಾಂ ಚಿನ್ನಾಭರಣ ನೀಡಿದ್ದರು. ಆಭರಣ ಪಡೆದ ಸುರೇಶ್ ನಾಪತ್ತೆಯಾಗಿದ್ದ. ತಾನು ಮೋಸ ಹೋಗಿರುವುದನ್ನು ಅರಿತ ಬೆಂಗಳೂರಿನ ಮಹಿಳೆ ಈತ ಬ್ಯಾಡರಹಳ್ಳಿಯಲ್ಲಿರುವುದು ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಸುರೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Facebook Comments