ಆಂಧ್ರದಿಂದ ಬಂದು ಮನೆಗಳ್ಳತನ ಮಾಡಿದ್ದ ವ್ಯಕ್ತಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ಜೂಜಾಟದ ಚಟ ಹೊಂದಿದ್ದ ವ್ಯಕ್ತಿ ಆಂಧ್ರ ಪ್ರದೇಶದಿಂದ ನಗರಕ್ಕೆ ಬಂದು ಮನೆಗಳ್ಳತನ ಮಾಡಿ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಈತನಿಂದ 30 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ ನಿವಾಸಿ ರಾಯಪತಿ ವೆಂಕಣ್ಣ (44) ಬಂಧಿತ ಆರೋಪಿ.

ಈತ ಜೂಜಾಟದ ಚಟ ರೂಢಿಸಿಕೊಂಡಿದ್ದನು. 2010ನೆ ಸಾಲಿನಿಂದ ಆಂಧ್ರ ಪ್ರದೇಶದ ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಲ್ಲಿ 36 ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು ಐದು ಬಾರಿ ಜೈಲುಶಿಕ್ಷೆಗೆ ಗುರಿಯಾಗಿದ್ದನು. 2012ರಲ್ಲಿ ಬಳ್ಳಾರಿಯಲ್ಲಿ ಒಂದು ಕನ್ನಗಳವು ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದನು.

ಜನವರಿ 30ರಂದು ಕೆಂಪೇಗೌಡ ಲೇಔಟ್, ಲಗ್ಗೆರೆಯ ಸೋಫಿಯಾ ಶಾಲೆ ಹಿಂಭಾಗದ ನಿವಾಸಿ ಯೋಗೇಶ್ ಎಂಬುವವರ ಮನೆಯ ಬಾಗಿಲು ಒಡೆದು 119 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇದೀಗ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈತ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದು ಆರ್‍ಎಂಸಿ ಯಾರ್ಡ್‍ನ ಲಾಡ್ಜ್‍ವೊಂದರಲ್ಲಿ ರೂಂ ಮಾಡಿಕೊಂಡು ಪೀಣ್ಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿ ಅದೇ
ಬೈಕ್‍ನಲ್ಲಿ ಬಂದು ಮನೆಗಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈತನ ಬಂಧನದಿಂದ ಮಹಾಲಕ್ಷ್ಮಿ ಲೇಔಟ್ ಠಾಣೆಯ ಎರಡು ಹಗಲು ಕನ್ನಗಳವು ಮತ್ತು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿದೆ.

Facebook Comments