ಹೈದರಾಬಾದ್, ಉನ್ನಾವೋ ಕೃತ್ಯಗಳ ಬೆನ್ನಲ್ಲೇ ತ್ರಿಪುರಾದಲ್ಲಿ ಮತ್ತೊಂದು ಭೀಭತ್ಸ ಘಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲಾ, ಡಿ.8-ಹೈದರಾಬಾದ್ ಮತ್ತು ಉನ್ನಾವೋ ಗ್ಯಾಂಗ್‍ರೇಪ್ ಮತ್ತು ಮರ್ಡರ್ ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವಾಗಲೇ ಅದೇ ರೀತಿಯ ಮತ್ತೊಂದು ಪೈಶಾಚಿಕ ಕೃತ್ಯ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಡೆದಿದೆ.

ಹದಿನೇಳು ವರ್ಷದ ತರುಣಿಯೊಬ್ಬಳನ್ನು ಹಲವು ದಿನಗಳಿಂದ ಅಕ್ರಮ ಬಂಧನದಲ್ಲಿಟ್ಟು, ಆಕೆಯ ಗೆಳೆಯ ಮತ್ತು ಆತನ ಸ್ನೇಹಿತರು ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಆಕೆಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ರಾಜಧಾನಿ ಅಗರ್ತಲಾದಲ್ಲಿ ನಡೆದಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ಭುಗಿಲೆದ್ದಿದೆ.

ಯುವತಿಯ ಬಾಯ್ ಫ್ರೆಂಡ್ ಮತ್ತು ಆತನ ತಾಯಿ ಶುಕ್ರವಾರ ಆಕೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದ ತರುಣಿ ನಿನ್ನೆ ಸಂಜೆ ಜಿ.ಬಿ.ಪಂತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ದಕ್ಷಿಣ ಅಗರ್ತಲಾದ ಶಾಂತಿರ್‍ಬಜಾರ್‍ನ ಅಜಯ್ ರುದ್ರಪಾಲ್ ಎಂಬ ಯುವಕ ತನಗೆ ಪರಿಚಿತವಾಗಿದ್ದ ಯುವತಿಯನ್ನು ಅಪಹರಿಸಿ 50,000 ರೂ.ಗಳ ಒತ್ತೆ ಹಣಕ್ಕಾಗಿ ಪೋಷಕರನ್ನು ಪೀಡಿಸುತ್ತಿದ್ದ. ತರುಣಿಯ ತಂದೆ-ತಾಯಿ ಹಣ ಹೊಂದಿಸಲು ವಿಳಂಬ ಮಾಡಿದಾಗ ಸುಮಾರು ಎರಡು ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ತನ್ನ ಸ್ನೇಹಿತರೊಂದಿಗೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಿದ್ದ.

ಶುಕ್ರವಾರ ಆಕೆಯ ಪೋಷಕರು 17,000 ರೂ.ಗಳನ್ನು ನೀಡಿದ್ದರು. ಆದರೆ ಕಡಿಮೆ ಹಣ ನೀಡಿದ್ದರಿಂದ ಕುಪಿತಗೊಂಡ ಅಜಯ್ ಮತ್ತು ಆತನ ತಾಯಿ ತರುಣಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಯುವತಿಯ ಕುಟುಂಬದವರು ಮತ್ತು ಬಂದುಮಿತ್ರರು ಆಸ್ಪತ್ರೆ ಬಳಿ ಜಮಾಯಿಸಿದ್ದರು.

ಪೊಲೀಸ್ ರಕ್ಷಣೆಯಲ್ಲಿ ಅಲ್ಲಿಗೆ ಬಂದ ಅಜಯ್ ಮತ್ತು ಆತನ ತಾಯಿ ಮೇಲೆ ಸಾರ್ವಜನಿಕರು ದಾಳಿ ನಡೆಸಿ ಗಾಯಗೊಳಿಸಿದರು. ಪೊಲೀಸರು ಉದ್ರಿಕ್ತ ಗುಂಪನ್ನು ನಿಯಂತ್ರಿಸಿ ಅವರನ್ನು ಕಸ್ಟಡಿಯಲ್ಲಿ ಕರೆದೊಯ್ದರು. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಸುದ್ದಿ ಹಬ್ಬುತ್ತಿದ್ದಂತೆ ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹೈದರಾಬಾದ್‍ನ ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿದ ರೀತಿಯಲ್ಲೇ ಈ ಕೀಚಕರಿಗೂ ಶಾಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Facebook Comments

Sri Raghav

Admin