ಬೇಕರಿ ಮಾಲೀಕನನ್ನ ಸಜೀವ ದಹನ ಮಾಡಿದ ದೇವರಿಗೆ ಹಚ್ಚಿಟ್ಟ ದೀಪ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಜೂ.4- ದೇವರಿಗೆ ಹಚ್ಚಿಟ್ಟಿದ್ದ ದೀಪದ ಬೆಂಕಿ ತಗುಲಿ ಬೇಕರಿ ಹೊತ್ತಿ ಉರಿದ ಪರಿಣಾಮ ಮಾಲೀಕ ಸಜೀವವಾಗಿ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ರಾಜಸ್ಥಾನ ಮೂಲದ ಮಾಧವರಾವ್ ಚೌಧರಿ(35) ಮೃತ ದುರ್ದೈವಿ.

ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ, ಹಲವು ವರ್ಷಗಳಿಂದ ಬೇಕರಿ ನಡೆಸುತ್ತಿದ್ದ ಮಾಧವರಾವ್ ಅವರು ನಿನ್ನ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾತ್ರಿ ಪೂಜೆ ಮಾಡಿ, ದೀಪ ಹಚ್ಚಿಟ್ಟು ಲಾಕ್ ಮಾಡಿ ತಾವೂ ಬೇಕರಿಯಲ್ಲೇ ಮಲಗಿದ್ದರು.

ಆಕಸ್ಮಿಕವಾಗಿ ದೀಪದ ಬೆಂಕಿ ತಗುಲಿ ಬೇಕರಿ ಹೊತ್ತಿ ಉರಿದಿದೆ. ಈ ವೇಳೆ ಬೇಕರಿಯಲ್ಲೇ ಮಲಗಿದ್ದ ಮಾಧವರಾವ್ ಅವರೂ ಕೂಡ ಹೊರಬರಲಾರದೆ ಸಜೀವವಾಗಿ ದಹನಗೊಂಡಿದ್ದಾರೆ.

ಬೆಳಗ್ಗಿನ ಜಾವ ಬೇಕರಿಯಿಂದ ಹೊಗೆ ಬರುತ್ತಿದ್ದುದನ್ನು ಕಂಡು ದೌಡಾಯಿಸಿದ ಸ್ಥಳೀಯರು ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಹೊರ ತೆಗೆದರು. ಆದರೆ ಅಷ್ಟರಲ್ಲೇ ಮಾಧವರಾವ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ.  ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments