ಯುವಕನಿಗೆ ಬಂದಿದ್ದು ಜಾಂಡೀಸ್‌ ರೋಗ, ಕೊಂದಿದ್ದು ಮಾತ್ರ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

– ಕಲ್ಮೇಶ ಮಂಡ್ಯಾಳ
ಹುಬ್ಬಳ್ಳಿ,ಏ10- ಆ ಯುವಕನಿಗೆ ಯಾವುದೇ ಹೇಳಿಕೊ ಳ್ಳುವಂತಹ ಮಾರಣಾಂತಿಕ ಕಾಯಿಲೆ ಇರಲಿಲ್ಲ.‌ಆದರೆ ಅವನಿಗೆ ಕರೋನಾ ವೈರಸ್ ಸೋಂಕು ತಗುಲಿರಬಹುದೆಂದು ಶಂಕೆ ವ್ಯಕ್ತಪಡಿಸಿ ಯುವಕನನ್ನು ಬಲಿ ಪಡೆಯಲಾಯಿತು ಎನ್ನಲಾಗಿದೆ.

ಹೌದು ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಏ. 3ರಂದು ಮೃತಪಟ್ಟ ಧಾರವಾಡದ 31 ವರ್ಷದ ಎಂಜಿನಿಯರ್‌ ರಾಜು ನಾಯ್ಕ್‌ ಸಾವು ಇದಕ್ಕೆ ಜ್ವಲಂತ ಸಾಕ್ಷಿ. ನ್ಯುಮೋನಿಯಾ, ಜಾಂಡೀಸ್‌ನಿಂದ ಬಳಲುತ್ತಿದ್ದ ರಾಜುಗೆ ಕೋವಿಡ್‌-19 ಇರಬಹುದೆಂದು ಶಂಕಿಸಿ ಬೇರಾವುದೇ ಚಿಕಿತ್ಸೆ ನೀಡಲೇ ಇಲ್ಲ.

ಕೋವಿಡ್‌-19 ವರದಿ ಬರುವಷ್ಟರಲ್ಲಿ ಮೂರು ದಿನ ಕಳೆದಿದೆ. ಅಷ್ಟರಲ್ಲಿ ಕಾಯಿಲೆ ಉಲ್ಬಣಗೊಂಡು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ತ್ಯಜಿಸಬೇಕಾಯಿತು. 13 ತಿಂಗಳ ಹಿಂದೆಯಷ್ಟೇ ಇವರ ಮದುವೆಯಾಗಿತ್ತು. ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬ ಆಧಾರ ಸ್ತಂಭವನ್ನೇ ಕಳೆದುಕೊಂಡು ಪರಿತಪಿಸುವಂ ತಾಗಿದೆ.

ಪುಣೆ ಎಂದಿದ್ದಕ್ಕೆ ಚಿಕಿತ್ಸೆ ನೀಡಲಿಲ್ಲ ಪುಣೆಯಲ್ಲಿ ಎಂಜಿನಿಯರ್‌ ಆಗಿದ್ದ ರಾಜು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ವಾರದ ನಂತರ ಮುಖ, ಕಣ್ಣು ಹಳದಿ ಆಗಿದ್ದವು. ಅದರ ಜತೆಗೆ ಕೆಮ್ಮು, ಜ್ವರ ಇತ್ತು. ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ನ್ಯುಮೋನಿಯಾ, ಜಾಂಡೀಸ್‌ ಆಗಿದೆ ಎಂದಿದ್ದರು. ಆದರೆ, ಇವರು ಪುಣೆಯಿಂದ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಯಾವುದೇ ಚಿಕಿತ್ಸೆ ನೀಡದೆ ಕೋವಿಡ್‌-19 ತಪಾಸಣೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಿಕೊಟ್ಟಿದ್ದರು.

ಮಾ. 30ರ ರಾತ್ರಿ ರಾಜು ಅವರನ್ನು ಕುಟುಂಬದ ಸದಸ್ಯರು ಕಿಮ್ಸ್‌ಗೆ ಕರೆತಂದರೆ, ಖಾಸಗಿ ಆಸ್ಪತ್ರೆ ನೀಡಿದ ಪತ್ರದ ಮೇಲೆ ನೇರ ಐಸೋಲೇಶನ್‌ ವಾರ್ಡ್‌ಗೆ ಕಳುಹಿಸಿಕೊಟ್ಟರು. ಮರುದಿನ ಇವರ ಗಂಟಲು ಹಾಗೂ ಬಾಯಿ ದ್ರವ ಸಂಗ್ರಹಿಸಿ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿದರು. ಏಪ್ರಿಲ್‌ 1ಕ್ಕೆ ಬಂದ ವರದಿಯಲ್ಲಿ ನೆಗಟಿವ್‌ ಎಂದಿತ್ತು.

ಇನ್ನೂ ಆರು ತಿಂಗಳು ಬೇಕೇಬೇಕು ಸಾಮಾಜಿಕ ಅಂತರ, ಬಹು ಕಟ್ಟೆಚ್ಚರ: ತಜ್ಞರ ಕಾರ್ಯಪಡೆಯ ಸೂತ್ರಗಳಿವು!
ಎರಡು ದಿನ ಚಿಕಿತ್ಸೆ ನೀಡಿಲ್ಲ ‘‘ಕಿಮ್ಸ್‌ಗೆ ಕರೆದುಕೊಂಡು ಹೋದಾಗ ಆತ ನಡೆದುಕೊಂಡೇ ಐಸೋಲೇಶನ್‌ ವಾರ್ಡ್‌ಗೆ ಹೋಗಿದ್ದ. ಎರಡು ದಿನ ಯಾವುದೇ ಚಿಕಿತ್ಸೆ ನೀಡಿಲ್ಲ. ರಿಪೋರ್ಟ್‌ ಬರಬೇಕು ಎಂದು ಹೇಳುತ್ತಿದ್ದಾರೆ, ಊಟವನ್ನೂ ಕೊಟ್ಟಿಲ್ಲ ಎಂದು ರಾಜು ಹೇಳಿದ್ದ.

ವರದಿ ನೆಗಟಿವ್‌ ಬಂದ ಮೇಲೂ ಐಸೋಲೇಶನ್‌ ವಾರ್ಡ್‌ನಲ್ಲಿಯೇ ಇಡಲಾಗಿತ್ತು. ಮೂರನೇ ದಿನ ಹೊರಗೆ ಬರುವುದರೊಳಗೆ ಆತ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ. ಕೋವಿಡ್‌ ವರದಿ ಬರುವವರೆಗೆ ರಾಜುಗೆ ಕಿಮ್ಸ್‌ನಲ್ಲಿ ಬೇರಾವುದೇ ಚಿಕಿತ್ಸೆ ನೀಡದಿರುವುದೇ ಆತನ ಸಾವಿಗೆ ಕಾರಣ,’’ ಎಂದು ರಾಜು ತಂದೆ ಚಂದ್ರಕಾಂತ ಆರೋಪ ಮಾಡುತ್ತಾರೆ.

ಹೇಳಿದ್ದೆ ಬೇರೆ, ವರದಿಯಲ್ಲಿ ಇದ್ದುದು ಬೇರೆ ‘‘ಅವರಿಗೆ ಅಗತ್ಯ ಚಿಕಿತ್ಸೆ ನೀಡಿದ್ದೇವೆ. ಆದರೆ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ದಾಖಲಿಸಿಕೊಳ್ಳದೇ ವಾಪಸ್‌ ಕಳುಹಿಸಿದ್ದರಿಂದ ಮತ್ತೆ ಕಿಮ್ಸ್‌ಗೆ ಕರೆ ತಂದರು. ಅಷ್ಟರಲ್ಲಿ ಆತನಿಗೆ ಉಸಿರಾಟ ತೊಂದರೆಯಾಗಿತ್ತು. ಆದರೂ ವೆಂಟಿಲೇಟರ್‌ನಲ್ಲಿ ಇಟ್ಟಿದ್ದೆವು. ಪ್ರಯೋಜನಕ್ಕೆ ಬರಲಿಲ್ಲ. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ,’’ ಎಂದು ಕಿಮ್ಸ್‌ ವೈದ್ಯರು ಹೇಳುತ್ತಾರೆ.

# ಬುಲೆಟ್‌ನಲ್ಲಿ ಧಾವಿಸಿ ಔಷಧ ತಲುಪಿಸುತ್ತಿರುವ ಬೆಂಗಳೂರಿನ ಸೈನ್ಸ್‌ ಟೀಚರ್‌ ದಶಮಿ ಮೋಹನ್‌! ಆತನಿಗೆ ನ್ಯುಮೋನಿಯಾ, ಜಾಂಡೀಸ್‌ ಜತೆ ಬ್ಲಡ್‌ ಕ್ಯಾನ್ಸರ್‌ ಇತ್ತು ಎಂದು ವೈದ್ಯರು ಮೌಖಿಕವಾಗಿ ಹೇಳಿದ್ದಾರೆ. ಆದರೆ, ಕೇಸ್‌ ರಿಪೋರ್ಟ್‌ನಲ್ಲಿ ಬ್ಲಡ್‌ ಕ್ಯಾನ್ಸರ್‌ ಇರುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ತೀವ್ರವಾದ ಪಿತ್ತಕೋಶದ ವೈಫಲ್ಯ ಹಾಗೂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದಿದೆ.

# ರಾಜುಗೆ ನ್ಯುಮೋನಿಯಾ, ಜಾಂಡೀಸ್‌ ಜತೆ ಬ್ಲಡ್‌ ಕ್ಯಾನ್ಸರ್‌ ಲಕ್ಷಣಗಳಿದ್ದವು. ಅವರಿಗೆ ನಿರ್ಲಕ್ಷ್ಯ ಮಾಡದೆ ಅಗತ್ಯ ಚಿಕಿತ್ಸೆಯನ್ನು ಕಿಮ್ಸ್‌ನಲ್ಲಿ ನೀಡಲಾಗಿದೆ. ಚಿಕಿತ್ಸೆಯ ಭಾಗವಾಗಿ ಕೋವಿಡ್‌ ಪರೀಕ್ಷೆ ಮಾಡಿಸಲಾಗಿತ್ತೆ ಹೊರತೂ ಬೇರೆ ಉದ್ದೇಶ ಇರಲಿಲ್ಲ. ಕೋವಿಡ್‌ ನೆಗೆಟಿವ್‌ ಬಂದ ಮೇಲೆ ಉಳಿದ ಚಿಕಿತ್ಸೆ ಮುಂದುವರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
– ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

# ವೈದ್ಯರ ನಿರ್ಲಕ್ಷ್ಯದಿಂದ ರಾಜುನಂತಹ ಎಷ್ಟು ಜೀವ ಬಲಿಯಾಗುತ್ತಿವೆಯೊ? ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ.
– ಚಂದ್ರಕಾಂತ, ರಾಜುವಿನ ತಂದೆ

Facebook Comments

Sri Raghav

Admin